ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದೇನು?

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್
ಮಂಗಳೂರು : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ಸಫ್ವಾನ್, ನಿಯಾಜ್, ಮುಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮುಹಮ್ಮದ್ ರಿಝ್ವಾನ್ ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದೇನು?:
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಗುರುತಿಸಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಬ್ದುಲ್ ಸಫ್ವಾನ್ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ. 2023ರಲ್ಲಿ ತಂಡವೊಂದು ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸುಹಾಸ್ ಶೆಟ್ಟಿ ತಂಡದಿಂದ ಹತ್ಯೆಯಾಗುವ ಆತಂಕ ಇದ್ದಿದ್ದರಿಂದ ಸುಹಾಸ್ ಶೆಟ್ಟಿಯ ಹತ್ಯೆಗೆ ಸಫ್ವಾನ್ ತೀರ್ಮಾನಿಸಿದ್ದ. ಈ ಹಿನ್ನಲೆ ಸಫ್ವಾನ್ 2022 ರಲ್ಲಿ ಕೊಲೆಯಾದ ಫಾಝಿಲ್ ಸಹೋದರ ಆದಿಲ್ ನನ್ನು ಸಂಪರ್ಕಿಸಿದ್ದಾನೆ. ಸುಹಾಸ್ ಹತ್ಯೆಗೆ ಆದಿಲ್ 5 ಲಕ್ಷ ರೂ. ಕೊಡುವ ಭರವಸೆ ನೀಡಿ, 3 ಲಕ್ಷ ರೂ. ಮುಂಗಡ ಪಾವತಿಸಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
ನಿಯಾಝ್ ಎಂಬಾತ ತನ್ನ ಸ್ನೇಹಿತರಾದ ನಾಗರಾಜ್ ಮತ್ತು ರಂಜಿತ್ ಎಂಬವರನ್ನು ಸಂಪರ್ಕ ಮಾಡಿದ್ದಾನೆ. ಆರೋಪಿಗಳು ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಹತ್ಯೆ ನಡೆಸಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.





