ಸುಳ್ಯ | ಹಲ್ಲೆ, ಕೊಲೆ ಬೆದರಿಕೆ: ಪ್ರಕರಣ ದಾಖಲು

ಸುಳ್ಯ, ನ.21: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದ ಘಟನೆ ಕಡಬ ತಾಲೂಕಿನ ಎಣ್ಮೂರಿನ ಹೇಮಳದಲ್ಲಿ ನ.18ರಂದು ನಡೆದಿದೆ.
ಕಡಬ ತಾಲೂಕು ಎಣ್ಮೂರಿನ ಹೇಮಳ ನಿವಾಸಿ ಶೀನಪ್ಪಗೌಡ ಎಂಬವರ ಸಹೋದರನ ಮಗ ರಾಮಣ್ಣ ಗೌಡ ಎಂಬಾತ ಬಾವಿಗೆ ಅಳವಡಿಸಿದ್ದ ಪೈಪನ್ನು ತೆಗೆದ ವೇಳೆ, ಶೀನಪ್ಪಗೌಡ ಈ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ರಾಮಣ್ಣ ಗೌಡ ನೀವು ಈ ಬಾವಿಯ ನೀರನ್ನು ಕುಡಿಯಬಾರದೆಂದು ಹೇಳಿ ಶೀನಪ್ಪ ಗೌಡರ ಕತ್ತು ಬಿಗಿಯಾಗಿ ಹಿಡಿದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಶೀನಪ್ಪಗೌಡರ ಕಿರುಚಾಟ ಕೇಳಿ ಪತ್ನಿ, ನೆರೆಮನೆಯವರು ಜಗಳ ಬಿಡಿಸಲು ಬಂದಿದ್ದು, ಈ ವೇಳೆ ಶೀನಪ್ಪ ಗೌಡರನ್ನು ಆರೋಪಿ ನೆಲಕ್ಕೆ ದೂಡಿ ಹಾಕಿ ಮರದ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.
ಗಾಯಗೊಂಡ ಶೀನಪ್ಪಗೌಡರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆರೋಪಿ ರಾಮಣ್ಣ ಗೌಡನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





