ಸುಳ್ಯ: ರಸ್ತೆ ಅವ್ಯವಸ್ಥೆ ಖಂಡಿಸಿ ಪತ್ರಕರ್ತರಿಂದ ಪ್ರತಿಭಟನೆ

ಸುಳ್ಯ: ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೀವ್ರ ಅಡಚಣೆಯಾಗಿರುವ ಸುಳ್ಯ ನಗರದ ಹಳೆಗೇಟು- ಜಯನಗರ ರಸ್ತೆಯ ಅವ್ಯವಸ್ಥೆಯನ್ನು ವಿರೋಧಿಸಿ ಸುಳ್ಯ ಜಯನಗರದ ಸ್ಥಳೀಯ ಪತ್ರಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪತ್ರಕರ್ತರಾದ ಹಸೈನಾರ್ ಜಯನಗರ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಜಯಶ್ರೀ ಕೊಯಿಂಗೋಡಿ ಹಾಗೂ ರೇಖಾ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಹಲವು ಸಮಯದಿಂದ ಹಳೆಗೇಟು- ಜಯನಗರ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಹಲವು ಬಾರಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಪತ್ರಿಕೆಗಳು ವರದಿ ಮಾಡಿದರೂ, ಸಾರ್ವಜನಿಕರು ಪ್ರತಿಭಟನೆ ನಡೆಸಿದರೂ ರಸ್ತೆ ಅಭಿವೃದ್ಧಿ ಆಗಿಲ್ಲ. ಈ ಹಿನ್ನಲೆಯಲ್ಲಿ ಪತ್ರಕರ್ತರೇ ಬೀದಿಗೆ ಇಳಿಯಬೇಕಾದ ಸ್ಥಿತಿ ಉಂಟಾಗಿದೆ ಎಂದು ಹಸೈನಾರ್ ಜಯನಗರ ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಅವರು ಒಂದು ವಾರದಲ್ಲಿ ರಸ್ತೆಯ ದುರಸ್ತಿ ಕಾರ್ಯ ಆರಂಭಿಸುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಒಂದು ವಾರದಲ್ಲಿ ರಸ್ತೆ ದುರಸ್ತಿ ಆರಂಭಿಸದೇ ಇದ್ದರೆ ನಗರ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಕರ್ತರು ಎಚ್ಚರಿಸಿದರು.





