ಸುಳ್ಯ | ಕೂಜಿಮಲೆಯಲ್ಲಿ ಅಪರಿಚಿತ ಮಹಿಳೆಯ ಓಡಾಟ: ಎ.ಎನ್.ಎಫ್. ಶೋಧ ಚುರುಕು

FIle Photo
ಸುಳ್ಯ, ಮಾ.28: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದ ಕೂಜಿಮಲೆ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆಯೊಬ್ಬರ ಓಡಾಟ ಕಂಡುಬಂದಿದೆ ಎಂದು ಹೇಳಲಾಗಿದ್ದು, ಆಕೆ ನಕ್ಸಲ್ ಆಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಎ.ಎನ್.ಎಫ್. ಶೋಧ ಚುರುಕುಗೊಳಿಸಿದೆ.
ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿದ್ದು, ಬುಧವಾರ ಇಲ್ಲಿನ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಅಪರಿಚಿತ ಮಹಿಳೆಯೊಬ್ಬಳ ಓಡಾಟ ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ನಕ್ಸಲ್ ನಿಗ್ರಹ ಪಡೆ (ಎ.ಎನ್.ಎಫ್.)ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ.
ನಕ್ಸಲ್ ನಿಗ್ರಹ ಪಡೆ ಐನೆಕಿದು, ಕೂಜಿಮಲೆ ಆಸುಪಾಸಿನಲ್ಲೇ ಶೋಧ ಕಾರ್ಯ ಮುಂದುವರಿಸಿದೆ.
ಮಾ.16ರಂದು ನಾಲ್ವರು ಶಂಕಿತರ ತಂಡ ಕೂಜಿಮಲೆ ಎಸ್ಟೇಟ್ ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರೀದಿಸಿ ಅರಣ್ಯದತ್ತ ತೆರಳಿತ್ತು. ಮಾ.23ರಂದು ನಾಲ್ವರು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಭೇಟಿ ನೀಡಿ ಊಟ, ಆಹಾರ ಸಾಮಗ್ರಿ ಪಡೆದುಕೊಂಡು ತೆರಳಿದ್ದರು. ಇದೀಗ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೂಜಿಮಲೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ನಿರಂತರ ಶೋಧ ನಡೆಸುತ್ತಿದೆ.







