ಸುಳ್ಯ | ಪರವಾನಿಗೆ ಇಲ್ಲದೆ ಕೆಂಪುಕಲ್ಲು ಸಾಗಾಟ : ಪ್ರಕರಣ ದಾಖಲು

ಸುಳ್ಯ, ನ.21: ಪರವಾನಿಗೆ ಇಲ್ಲದೆ ಕೇರಳ ಕಡೆಯಿಂದ ಮಡಿಕೇರಿ ಕಡೆಗೆ ಲಾರಿಯಲ್ಲಿ ಸಾಗಿಸುತ್ತಿದ್ದ ಕೆಂಪು ಕಲ್ಲುಗಳನ್ನು ಸುಳ್ಯ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೇರಳದ ಮಿಂಚಿನ ಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಪರವಾನಿಗೆ ಇಲ್ಲದೇ ಕೊಂಡೊಯ್ಯುತ್ತಿದ್ದ ಲಾರಿಯನ್ನು ಕಲ್ಲುಗುಂಡಿ ಹೊರ ಠಾಣೆಯ ಬಳಿ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಕಲ್ಲು ಸಾಗಾಟಕ್ಕೆ ಪರವಾನಿಗೆ ಇಲ್ಲದೇ ಇರುವ ಬಗ್ಗೆ ತಿಳಿದುಬಂದಿದ್ದು, ಅವರು ಕೂಡಲೇ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣೆಯ ಎಸ್ಸೈ ಸರಸ್ವತಿ ಬಿ.ಟಿ. ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿಚಾರಿಸಿ ಲಾರಿ ಹಾಗೂ ಕೆಂಪು ಕಲ್ಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಳಿಕ ಲಾರಿ ಚಾಲಕ ಸೈಯದ್ ಹಾಗೂ ವಾಹನದ ಮಾಲಕ ಶೇಷಪ್ಪಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಉದಯಕುಮಾರ್ ಹಾಗೂ ಕಾನ್‌ಸ್ಟೇಬಲ್ ಪ್ರಕಾಶ್ ಹಾಗೂ ಸೋಮಶೇಖರ್ ಭಾಗವಹಿಸಿದ್ದರು.





