ಸುಳ್ಯ | ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಯರಾಮ್‌ಗೆ ಸನ್ಮಾನ

ಸುಳ್ಯ, ನ.21: ರಾಜ್ಯ ಸರಕಾರ ಅತ್ಯುತ್ತಮ ಸಹಕಾರಿಗಳಿಗೆ ನೀಡುವ ಸಹಕಾರ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಸುಳ್ಯದ ಹಿರಿಯ ಸಹಕಾರಿ ಧುರೀಣ ಪಿ.ಸಿ ಜಯರಾಂ ಅವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸುಡಾ) ಅಧ್ಯಕ್ಷ ಕೆ.ಎಂ.ಮುಸ್ತಫ ಸನ್ಮಾನಿಸಿದರು.
ಸುಮಾರು 32 ವರ್ಷಗಳ ಸುದೀರ್ಘ ಅವಧಿಗೆ ಮಡಪ್ಪಾಡಿ ಸೇವಾ ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಿ.ಸಿ. ಜಯರಾಂ ಸುಳ್ಯದಲ್ಲಿ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸ್ಥಾಪಕ ಅಧ್ಯಕ್ಷರಾಗಿ, ಬೆಳ್ಳಿ ಹಬ್ಬ ವರ್ಷದಲ್ಲಿ ಮತ್ತೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಹೊಂದಿದವರು. ಸುಳ್ಯದ ಸಹಕಾರ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಅಭಿನಂದನಾ ಭಾಷಣದಲ್ಲಿ ಕೆ.ಎಂ. ಮುಸ್ತಫ ತಿಳಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ಎಸ್. ಗಂಗಾಧರ್, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ನಗರ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಖಜಾಂಚಿ ಕೆ. ಬಿ. ಇಬ್ರಾಹಿಂ, ಯುನೈಟೆಡ್ ಸ್ಪೋರ್ಟ್ಸ್ ಸದಸ್ಯ ಬಶೀರ್ ಕಚ್ಚು, ಉದ್ಯಮಿ ಜಾಫರ್ ಸೈಕಲ್ ಉಪಸ್ಥಿತರಿದ್ದರು.





