ಸುಳ್ಯದ ವೆಂಟೆಡ್ ಡ್ಯಾಂನಿಂದ ನೀರು ಹೊರಕ್ಕೆ; ನೀರು ಸಂಗ್ರಹಗೊಂಡಿದ್ದ ಭೂ ಪ್ರದೇಶದಲ್ಲಿ ಕುಸಿತ

ಸುಳ್ಯ: ಕಲ್ಲುಮುಟ್ಲು ಡ್ಯಾಂನ ಗೇಟ್ ತೆರವು ಮಾಡಿ ನೀರು ಹೊರಕ್ಕೆ ಬಿಟ್ಟ ಪರಿಣಾಮ ಹೀರು ಸಂಗ್ರಹಗೊಂಡಿದ್ದ ಡ್ಯಾಂ ಮೇಲ್ಭಾಗದಲ್ಲಿ ಮಣ್ಣು ಕುಸಿತಗೊಂಡ ಘಟನೆ ನಡೆದಿದೆ.
ಬೇಸಗೆಯಲ್ಲಿ ಡ್ಯಾಂ ಗೇಟ್ ಅಳವಡಿಸಿದ್ದರಿಂದ ಅಣೆಕಟ್ಟಿನಲ್ಲಿ ಸುಮಾರು 10-15 ಅಡಿ ಎತ್ತರದಲ್ಲಿ ನೀರು ಸಂಗ್ರಹಗೊಂಡು ಎರಡು ಭಾಗದಲ್ಲಿ ಕೃಷಿ ತೋಟಗಳು ಕಳೆದ 6 ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡಿದ್ದವು.
ಇದೀಗ ನಿರಂತರ ಮಳೆ ಹಿನ್ನಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದ ಡ್ಯಾಂ ಗೇಟ್ ತೆರವು ಮಾಡಿ ನೀರು ಹೊರಕ್ಕೆ ಬಿಡಲಾಗಿದೆ. ಪರಿಣಾಮ ನದಿ ಬದಿಯಲ್ಲಿ ಮಣ್ಣು ಕುಸಿತಗೊಳ್ಳುತ್ತಿದ್ದು, ನದಿ ಬದಿಯ ಮಣ್ಣು ಮರ ಸಮೇತ ನದಿಗೆ ಬೀಳುತ್ತಿದೆ. ಅಲ್ಲದೇ ನೀರಿನಲ್ಲಿ ಮುಳುಗಿದ್ದ ಅಡಕೆ ತೋಟಗಳಿಗೆ ಹಾನಿಯುಂಟಾಗಿದೆ. ಜಲಾವೃತಗೊಂಡಿದ್ದ ಕೃಷಿ ಭೂಮಿ ಕುಸಿಯತೊಡಗಿದ್ದು ಮಣ್ಣಿನ ಸಮೇತ ಮರಗಳು ಮಗುಚಿ ನದಿಗೆ ಬಿದ್ದಿವೆ. ಬದಿಯಲ್ಲಿ ಇನ್ನೂ ಜರಿತಗೊಂಡು ಮರಗಳು ಬೀಳುವ ಸ್ಥಿತಿಯಲ್ಲಿ ಇದೆ. ಅಡಕೆ, ತೆಂಗಿನ ಮರಗಳು ನೀರು ಪಾಲಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚಿನ ಮಳೆಗೆ ಇನ್ನಷ್ಟು ಕುಸಿತ ಸಂಭವಿಸುವ ಮೊದಲು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.





