ಸುಳ್ಯ | ಸಬ್ ಸ್ಟೇಷನ್ ಅನುಷ್ಠಾನಕ್ಕೆ ಇನ್ನೆಷ್ಟು ವರ್ಷಗಳು ಬೇಕು?

ಸುಳ್ಯ, ನ.11:ಜನರು ಸುಳ್ಯದಲ್ಲಿ 110 ಕೆ.ವಿ. ಸಬ್ ಸ್ಟೇಷನ್‌ನ ಅನುಷ್ಠಾನಕ್ಕೆ ಇನ್ನೆಷ್ಟು ವರ್ಷ ಕಾಯಬೇಕು? ವಿದ್ಯುತ್ ಲೈನ್ ಎಳೆಯಲು ವಿಳಂಬವೇಕೆ? ಎಂದು ವಿದ್ಯುತ್ ಗ್ರಾಹಕರು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ಸುಳ್ಯ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಬುಧವಾರ ನಡೆದಿದೆ.
ಮೆಸ್ಕಾಂ ಅಧೀಕ್ಷಕ ಇಂಜಿನಿ ಯರ್ ಕೃಷ್ಣರಾಜ್ ಕೆ. ಅಧ್ಯಕ್ಷತೆಯಲ್ಲಿ ಸುಳ್ಯ ತಾಪಂ ಸಭಾಂಗಣದಲ್ಲಿ ನಡೆದ ಸುಳ್ಯ ಮತ್ತು ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಜನ ಸಂಪರ್ಕ ಸಭೆಯಲ್ಲಿ ಈ ಕುರಿತು ಜಿ.ಕೆ.ಹಮೀದ್ ಸಂಪಾಜೆ, ರಾಧಾಕೃಷ್ಣ ಬೊಳ್ಳೂರು, ನಂದರಾಜ ಸಂಕೇಶ, ಆರ್.ಬಿ.ಬಶೀರ್, ಸತ್ಯಕುಮಾರ್ ಆಡಿಂಜ, ಇಬ್ರಾಹೀಂ ಅಂಬಟೆಕಜೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.
ಸಬ್ ಸ್ಟೇಶನ್ ಕೆಲಸ ಆಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಲೈನ್ ಹಾದು ಬರಲು ಒಟ್ಟು 89 ಟವರ್ ಆಗ ಬೇಕಾಗಿದ್ದು, ಅದರಲ್ಲಿ 10 ಟವರ್ ಆಗಿದೆ. ಸುಳ್ಯದಲ್ಲಿ ಟವರ್ ಸ್ಥಾಪಿಸಬೇಕಾದ ಜಾಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಪುತ್ತೂರು ಭಾಗದಲ್ಲಿ 39 ಟವರ್ ಸ್ಥಾಪಿಸಬೇಕಾದ ಜಾಗದ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಕೆಲವೊಂದು ಕಡೆ ಜಾಗದ ಮಾಲಕರ ಆಕ್ಷೇಪಣೆ ಇದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಸಚಿನ್ ವಿವರ ನೀಡಿದರು.
ಈ ವೇಳೆ ಮಾತನಾಡಿದ ಜಿ.ಕೆ. ಹಮೀದ್, ಈ ಭಾಗದಿಂದ ಕೋಲಾರಕ್ಕೆ ಗುಡ್ಡ ಅಗೆದು ನೀರು ಕೊಂಡು ಹೋಗುತ್ತಾರೆ. ಆದರೆ ಪುತ್ತೂರಿನಿಂದ ಸುಳ್ಯಕ್ಕೆ 110 ಕೆ.ವಿ. ಲೈನ್ ಯಾಕೆ ಇಷ್ಟು ವಿಳಂಬ ಎಂದು ಪ್ರಶ್ನಿಸಿದರು. ಆಕ್ಷೇಪ ಮಾಡುವವರ ಪಟ್ಟಿ ತಯಾರಿಸಿ ಬಿಡುಗಡೆ ಮಾಡಿ. ಅವರೊಂದಿಗೆ ಸುಳ್ಯ ಮತ್ತು ಪುತ್ತೂರಿನ ಶಾಸಕರು, ಇತರ ಪ್ರತಿನಿಧಿಗಳು ಮಾತನಾಡಿ ಮನವೊಲಿಸುವ ಕಾರ್ಯ ಮಾಡುತ್ತಾರೆ ಎಂದು ಸಭೆಯಲ್ಲಿದ್ದವರು ಹೇಳಿದರು.
ಜಿ.ಕೆ. ಹಮೀದ್ ಮತ್ತೊಮ್ಮೆ ಎಲ್ಲೆಲ್ಲಿ ಟವರ್ ಆಗಿದೆ ಎಂಬ ಕುರಿತು ಪ್ರಶ್ನಿಸಿದರು. ಆ ವೇಳೆ ಇಂಜಿನಿಯರ್ ಸಚಿನ್, ಟವರ್‌ಗೆ ಪೌಂಡೇಶನ್ ಮಾಡಲಾಗಿದೆ. ಟವರ್ ಏಕಕಾಲಕ್ಕೆ ಜೋಡಣೆ ಮಾಡುತ್ತಾರೆ ಎಂದರು. ಇದರಿಂದ ಅಸಮಾಧಾನಗೊಂಡ ಹಮೀದ್, ಟವರ್ ಆಗಿದೆ ಎಂದು ಸಭೆಗೆ ಸುಳ್ಳು ಮಾಹಿತಿ ನೀಡಿರುವುದು ಅಕ್ಷಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಸುಬ್ರಹ್ಮಣ್ಯ ಎಇಇ ಸತೀಶ್ ಸಪಲ್ಯ, ಸಹಾಯಕ ಇಂಜಿನಿಯರ್‌ಗಳಾದ ಹರಿಕೃಷ್ಣ, ಚಿದಾನಂದ, ಸುಪ್ರೀತ್, ಉಷಾ ಕುಮಾರಿ, ಕಿರಿಯ ಇಂಜಿನಿಯರ್ ಮಹೇಶ್, ಪರಶುರಾಮ, ಲೋಕೇಶ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.







