ಸುರತ್ಕಲ್: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಸುರತ್ಕಲ್: ಹೊಸಬೆಟ್ಟು ಕೊರ್ದಬ್ಬು ಬಳಿಯ ನಿವಾಸಿ ಸುಮತಿ ಪ್ರಭು ಎಂಬವರ ಕೊಲೆಗೈದಿರುವ ಪ್ರಕರಣದಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉತ್ತರ ಪ್ರದೇಶದ ಅಮರ್ಥ್ ಜಿಲ್ಲೆಯ ಮಂಡಿನ್‌ಪುರದ ರಾಂಪುರ ಥೇಗ್‌ನ ನಿವಾಸಿ ಶಹನವಾಜ್ ಅಲಿಯಾಸ್ ಶಾನು ಎಂದು ಗುರುತಿಸಲಾಗಿದೆ.
2014ರ ಫೆಬ್ರವರಿ 8ರಂದು ಕುಳಾಯಿಯ ಹೊಸಬೆಟ್ಟು ಕೊರ್ದಬ್ಬು ದೈವಸ್ಥಾನದ 'ಕಾಲಾ' ಬಳಿಯ ನಿವಾಸಿ ಸುಮತಿ ಪ್ರಭು ಅವರ ಕತ್ತು ಸೀಳಿ ಕೊಲೆ ಮಾಡಿ ಸುಮಾರು 3.8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಲಾಗಿತ್ತು. ಅವರ ಮಗ ಗುರುದಾಸ್ ಪ್ರಭು ನೀಡಿದ್ದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 44/2014 ರ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣದ ಮೇಲೆ ಐಪಿಸಿ ಸೆಕ್ಷನ್ 120(ಬಿ), 449, 392, 302, ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ರಾಜಸ್ಥಾನ ಭರತ್ಪುರ ಜಿಲ್ಲೆಯ ನಿವಾಸಿಗಳಾದ ಶಿವರಾಮ್, ಭಯಾನ್ ತಾಲೂಕಿನ ನಿವಾಸಿ, ಬಹದ್ದೂರ್ ಸಿಂಗ್ ಅಲಿಯಾಸ್ ಬಹದ್ದೂರ್ ಅಲಿಯಾಸ್ ಬುಯ್ಯ, ಉತ್ತರ ಪ್ರದೇಶದ ಅಮರ್ಥ್ ಜಿಲ್ಲೆಯ ಮಂಡಿನ್‌ಪುರದ ರಾಂಪುರ ಥೇಗ್‌ನ ನಿವಾಸಿ ಶಹನವಾಜ್ ಅಲಿಯಾಸ್ ಶಾನು ಎಂಬವರನ್ನು ಬಂಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಳಿಕ ಇವರಿಗೆ ಜಾಮೀನು ಮಂಜೂರು ಆಗಿತ್ತು. ಆದರೆ, ಜಾಮೀನು ಪಡೆದುಕೊಂಡ ಬಳಿಕ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಈ ನಡುವೆ ಪೊಲೀಸರು ಶಹನವಾಜ್ ಅಲಿಯಾಸ್ ಶಾನುನನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಕರಾಡ್‌ನಲ್ಲಿ ಪೊಲೀಸರು ಪತ್ತೆಹಚ್ಚಿ, ಆಗಸ್ಟ್ 4 ಬಂಧಿಸಿ ಭೋಪಾಲ್‌ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಟ್ರಾನ್ಸಿಟ್ ವಾರಂಟ್ ಪಡೆದು ಆಗಸ್ಟ್ 6ರಂದು ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ಅಜಿತ್ ಮ್ಯಾಥ್ಯೂ ಮತ್ತು ರವಿ ಡಿ., ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಸುನಿಲ್ ಕುಸನಾಲ್ ಅವರು ಆರೋಪಿಯ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.







