ಸುರತ್ಕಲ್: ನವೀಕರಿಸಲಾದ ಸಿ.ಎನ್. ಶೆಟ್ಟಿ ಕನ್ವೆನ್ಷನ್ ಸಭಾಂಗಣದ ಉದ್ಘಾಟನೆ

ಸುರತ್ಕಲ್: ಬೈಕಂಪಾಡಿಯ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ನ ನವೀಕರಿಸಲಾದ ಸಿ.ಎನ್. ಶೆಟ್ಟಿ ಕನ್ವೆನ್ಷನ್ ಸಭಾಂಗಣದ ಉದ್ಘಾಟನೆ ಬುಧವಾರ ನೆರವೇರಿತು.
ಸಭಾಂಗಣವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲ ಉದ್ಯಮಿಗಳು ಸೇರಿಕೊಂಡು ಸಹಕರಿಸಿದರೆ ಊರು ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರಿಗಳು, ಉದ್ದಿಮೆಗಳು ಒಬ್ಬರನ್ನೊಬ್ಬರು ದೂರಿಕೊಂಡು ಇದ್ದರೆ ಯಾವ ಕೆಲಸವೂ ಆಗುವುದಿಲ್ಲ. ಹಾಗಾಗಿ ಎಲ್ಲರನ್ನು ಒಂದೆಡೆ ಸೇರಿಸಿ ಜಿಲ್ಲಾಧಿಕಾರಿಯವರ ನೇತೃತ್ಬದಲ್ಲಿ ಸಭೆ ನಡೆಸಿ ಶೀಘ್ರ ಕೈಗಾರಿಕಾ ವಲಯದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಇದೇ ವೇಳೆ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಪದಾಧಿಕಾರಿಗಳು ಬೈಕಂಪಾಡಿ ಕೈಗಾರಿಕಾ ವಲಯದಲ್ಲಿನ ಸಮಸ್ಯೆಗಳನ್ನು ವಿವರಿಸಿದರು.
ಬಳಿಕ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು. ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಅಧ್ಯಕ್ಷ ಎನ್. ಅರುಣ್ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷರಾದ ಎಂ.ಡಿ. ಪೂಜಾರಿ, ಕಾರ್ಯದರ್ಶಿ ಬಿ.ಎ. ಇಕ್ಬಾಲ್, ಜೊತೆ ಕಾರ್ಯದರ್ಶಿ ರೋಶನ್ ಬಾಳಿಗಾ ಬಿ., ಖಜಾಂಚಿ ರಾಮಚಂದ್ರ, ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.
ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ಉಪಾಧ್ಯಕ್ಷರಾದ ಎಂ.ಡಿ. ಪೂಜಾರಿ ಅವರು ಸಂವಿಧಾನದ ಪೀಠಿಕೆ ಓದಿದರು. ಅಧ್ಯಕ್ಷ ಎನ್. ಅರುಣ್ ಪಡಿಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಎ. ಇಕ್ಬಾಲ್ ಧನ್ಯವಾದ ಸಮರ್ಪಿಸಿದರು.
ಸಮಾರಂಭಕ್ಕೂ ಮುನ್ನ ಕೆನರಾ ಇಂಡಸ್ಟ್ರೀ ಅಸೋಸಿಯೇಶನ್ ವತಿಯಿಂದ ಸುಮಾರು 40 ಬ್ಯಾರಿಕೆಡ್ ಗಳನ್ನು ಮಂಗಳೂರು ಸಂಚಾರ ವಿಭಾಗದ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಅವರ ಮೂಲಕ ಮಂಗಳೂರು ಉತ್ತರ ಸಂಚಾರ ಪೊಲೀಸರಿಗೆ ಹಸ್ತಾಂತರಿಸಲಾಯಿತು.







