Surathkal | ಬಸ್ ಢಿಕ್ಕಿಯಾಗಿ ಪಾದಾಚಾರಿ ಮೃತ್ಯು; ಚಾಲಕನ ಬಂಧನ

ಸಾಂದರ್ಭಿಕ ಚಿತ್ರ
ಸುರತ್ಕಲ್: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ವಿರುದ್ಧ ದಿಕ್ಕಿನಲ್ಲಿ ಬಂದ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಬೈಕಂಪಾಡಿ ಚಿತ್ರಾಪುರ ಬಳಿ ವರದಿಯಾಗಿದೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ಬಸ್ ಚಾಲಕ ಕೇರಳ ಮೂಲದ ರಾಧಾಕೃಷ್ಣನ್ ಎಂಬಾತನನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಚಿತ್ರಾಪುರ ಬಳಿಯ ನ್ಯೂ ಸ್ಟಾರ್ ಬೆಡ್ ಮಾರ್ಟ್ ಬಳಿ ನಿಂತುಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಕೇರಳ ನೋಂದಣಿಯ ಬಸ್ ಅನ್ನು ಚಾಲಕ ರಾಧಾಕೃಷ್ಣನ್ ಎಂಬಾತ ವಿರುದ್ಧ ದಿಕ್ಕಿನಲ್ಲಿ ತೀವ್ರ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ರಸ್ತೆಯನ್ನು ದಾಟಲು ನಿಂತಿದ್ದ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.
ಅಪಘಾತದ ರಭಸಕ್ಕೆ ವ್ಯಕ್ತಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಆತನ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





