ಸುರತ್ಕಲ್| ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು, ಇನ್ನೋರ್ವನಿಗೆ ಗಾಯ

ಸುರತ್ಕಲ್: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ.
ಮೃತರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ (61) ಮತ್ತು ಚೇಳಾಯರಿನಲ್ಲಿ ವಾಸವಿರುವ ಹನುಮಂತ ಎಂಬವರ ಮಗ ವಿಶ್ವನಾಥ (16) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆಸಿದ್ದ ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕರುಣಾಕರ ಶೆಟ್ಟಿ ಅವರು ಮುಕ್ಕದಲ್ಲಿನ ಅಂಗಡಿ ಮುಚ್ಚಿ ಹಾಲಿಗೆ ಬಂದಿದ್ದ ನೆರೆ ಮನೆಯ ವಿಶ್ವಾನಾಥ ಅವರನ್ನು ಕುಳ್ಳಿರಿಸಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ದಾಟಿತ್ತಿದ್ದ ವೇಳೆ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆಯಿತೆನ್ನಲಾಗಿದೆ.
ಅಪಘಾತದ ರಭಸಕ್ಕೆ ಕರುಣಾಕರ ಶೆಟ್ಟಿ ಅವರು ಸುಮಾರು 50ಮೀಟರ್ ದೂರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ತಲೆಗೆ ಬಲವಾದ ಹೊಡೆತ ಬಿದ್ದು, ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ. ಘಟನೆಯಿಂದ ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿದ್ದ ವಿಶ್ವನಾಥ ಅವರಿಗೆ ಕೈಕಾಲಿಗೆ ಗಂಭೀರ ಗಾಯಗಳಾಗಿದ್ದು, ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.







