ಸುರತ್ಕಲ್: ಎಂ.ಆರ್.ಪಿ.ಎಲ್. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ

ಸುರತ್ಕಲ್: ಎಂ.ಆರ್.ಪಿ.ಎಲ್.ನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ಜೋಕಟ್ಟೆ–ಬಜ್ಪೆ ನಡುವಿನ ಫೇಸ್–3 ಘಟಕದ ಪೆಟ್ರೋಲಿಯಂ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಬೆಂಕಿಯ ಕಿಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸೇರುವ ಕೊಳವೆಗೆ ತಗುಲಿದೆ. ಬೆಂಕಿಯ ಕಿಡಿ ಸುಮಾರು 10 ಸಾವಿರ ಲೀಟರ್ ಸಾಮರ್ಥ್ಯದ ಸಂಸ್ಕರಣಾ ಟ್ಯಾಂಕ್‌ಗೆ ತಗುಲಿ ಅದು ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಈ ಸ್ಫೋಟದ ವೇಳೆ ಕೆಲವೇ ಅಡಿಗಳ ದೂರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರು ಸ್ಫೋಟದ ಭಾರೀ ಸದ್ದು ಕೇಳಿದಾಕ್ಷಣ ಸ್ಥಳದಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದಾಕ್ಷಣ ಬಜ್ಪೆ, ಜೋಕಟ್ಟೆ ಹಾಗೂ ಸುರತ್ಕಲ್ ಭಾಗದ ಎಂ.ಆರ್.ಪಿ.ಎಲ್.ನ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಲಾಗಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಘಟನೆಯ ಮಾಹಿತಿ ತಿಳಿದಾಕ್ಷಣ ಎಂ.ಆರ್.ಪಿ.ಎಲ್.ನ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಭೇಟಿ ನೀಡಿ ಸುಮಾರು ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ ಎಂದು ತಿಳಿದು ಬಂದಿದೆ.
ಎಂ.ಆರ್.ಪಿ.ಎಲ್‌ನಲ್ಲಿ ಹಾಟ್ ವರ್ಕ್ (ಬೆಂಕಿಯ ಕೆಲಸ) ನಡೆಯುತ್ತಿರುವ ವೇಳೆ ಯಾವುದೇ ಪೆಟ್ರೋಲಿಯಂ ತ್ಯಾಜ್ಯಗಳನ್ನು ಸಂಸ್ಕರಣಾ ಘಟಕಗಳಿಗೆ ಬಿಡುವಂತಿಲ್ಲ. ಆದರೆ ತ್ಯಾಜ್ಯ ನೀರನ್ನು ಬಿಟ್ಟ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಎಂ.ಆರ್.ಪಿ.ಎಲ್.ನ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದಿಂದ ಸಂಭವಿಸಿದೆ ಎಂದು ಜೋಕಟ್ಟೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.







