ತಾಯಿಯ ಪ್ರೋತ್ಸಾಹದಿಂದಾಗಿ ಹಾಕಿಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ: ಧನರಾಜ್ ಪಿಳ್ಳೈ

ಮಂಗಳೂರು: ನನ್ನ ಹೆತ್ತವರು ಅದರಲ್ಲೂ ತಾಯಿ ನೀಡಿದ ಪ್ರೋತ್ಸಾಹದಿಂದಾಗಿ ನನಗೆ ಹಾಕಿಯಲ್ಲಿ ಉನ್ನತ ಸಾಧನೆ, ಹಲವು ಪ್ರಶಸ್ತಿಗಳನ್ನು ಗಳಿಸಲು ಸಾಧ್ಯವಾಗಿದೆ ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಹೇಳಿದ್ದಾರೆ.
ಮಂಗಳಾ ಸ್ವಿಮ್ಮಿಂಗ್ ಕ್ಲಬ್(ರಿ), ಪನಾಮ ಕಾರ್ಪೊರೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ನಗರದ ಲೇಡಿಹಿಲ್‌ನ ಮಂಗಳೂರು ಮಹಾನಗರ ಪಾಲಿಕೆಯ ಈಜು ಕೊಳದಲ್ಲಿ ನಡೆದ ರಾಜ್ಯ ಮಟ್ಟದ ಮೆಡಲಿಸ್ಟ್ ಆ್ಯಂಡ್ ನಾನ್- ಮೆಡಲಿಸ್ಟ್ ಈಜು ಸ್ಪರ್ಧೆ ‘ಸ್ವಿಮ್ ಗಾಲಾ -2025’ನ್ನು ಉದ್ಘಾಟಿಸಿ ಮಾತನಾಡಿದರು.
ಹೆತ್ತವರು ತಮ್ಮ ಮಕ್ಕಳು ದೇಶದ ಪರ ಆಡುವ ಕನಸು ಕಾಣಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಅವರು ಪ್ರತಿಭಾವಂತರಾಗಿದ್ದರೆ ಒಂದಲ್ಲ ಒಂದು ದಿನ ರಾಜ್ಯ, ದೇಶದ ಪರ ಆಡುವ ಹೆತ್ತವರ ಕನಸು ನನಸಾಗುತ್ತದೆ. ಚಿಕ್ಕಂದಿನಲ್ಲಿ ಭಾರತ ಪರ ಹಾಕಿ ಆಡಬೇಕೆಂಬ ನಾನು ಕನಸು ಕಂಡಿದ್ದೆ. ತಂದೆ, ತಾಯಿ, ಸಹೋದರ ನನಗೆ ಹಾಕಿಯಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದರು ಎಂದು ಅವರು ನೆನಪಿಸಿಕೊಂಡರು.
ಹಾಕಿಯಲ್ಲಿ ಮಾಡಿದ ಸಾಧನೆಗಾಗಿ ಪದ್ಮಶ್ರೀ, ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ, ಅರ್ಜುನ್ ಪ್ರಶಸ್ತಿ ಲಭಿಸಿತು ಎಂದರು.
ಮಕ್ಕಳು ಯಾವತ್ತೂ ಹೆತ್ತವರನ್ನು ಮರೆಯಬಾರದು. ನಾನು ಜರ್ಮನಿ ಲೀಗ್‌ನಲ್ಲಿ ಆಡುತ್ತಿದ್ದಾಗ ನನಗೆ ಅರ್ಜುನ್ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿಯನ್ನು ಕೇಂದ್ರ ಸರಕಾರ ಪ್ರಕಟಿಸಿತು. ಆಗ ನಾನು ಪ್ರಶಸ್ತಿ ತಾಯಿಗೆ ಸ್ವೀಕರಿಸಲು ಅವಕಾಶ ನೀಡುವಂತೆ ಸರಕಾರಕ್ಕೆ ಕೇಳಿಕೊಂಡಿದ್ದೆ. ತಾಯಿ ರಾಷ್ಟ್ರಪತಿ ಭವನಕ್ಕೆ ತೆರಳಿ ನನ್ನ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು ಎಂದು ನೆನಪಿಸಿಕೊಂಡರು.
ಭಾರತದ ರಾಷ್ಟ್ರೀಯ ತಂಡದಲ್ಲಿ 15 ವರ್ಷಗಳ ಕಾಲ ಆಡಿರುವೆನು. ರಾಜ್ಯ ಮತ್ತು ರಾಷ್ಟ್ರ ತಂಡದಲ್ಲಿ ದೇಶದ ಪರ ಆಡಿರುವುದಕ್ಕೆ ಹೆಮ್ಮೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮಾತನಾಡಿ, ಮಂಗಳೂರಿನಲ್ಲಿ ಈಜು ಕಲಿಕೆಗೆ ವಿಶೇಷ ಅವಕಾಶಗಳು ಲಭ್ಯವಿದೆ. ಮೂರು ಅತ್ಯಾಧುನಿಕ ಈಜುಕೊಳಗಳು ಇಲ್ಲಿವೆ. ಸರ್ಕಾರ ಕೂಡಾ ಈಜುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದರು.
ಬೆಂಗಳೂರು ಲಕ್ಷಾಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್‌ನ ಸಹ ಸಂಸ್ಥಾಪಕ ಜೀವನ್ ಮಹದೇವ್ ಜೀವನ್ ಮಹಾದೇವ್ ಮಾತನಾಡಿ, ಈಜು ಜೀವನ ಕೌಶಲ್ಯ ಕಲೆ. ಇದರಲ್ಲಿ ಹೆತ್ತವರ ಶ್ರಮ ಅಡಕವಾಗಿದೆ. ಈಜುಗಾರಿಕೆ ಕರಗತ ಮಾಡಿಕೊಂಡರೆ ವಿಫುಲ ಅವಕಾಶಗಳಿವೆ ಎಂದು ಹೇಳಿದರು.
ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಅಧ್ಯಕ್ಷ ಪ್ರಮುಖ್ ರೈ ಅಧ್ಯಕ್ಷೆ ವಹಿಸಿ ಮಾತನಾಡಿ, ಮಂಗಳಾ ಈಜು ಕ್ಲಬ್ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅಂತರ್‌ರಾಷ್ಟ್ರೀಯ, ರಾಷ್ಟ್ರ ರಾಜ್ಯಮಟ್ಟದ ಪದಕ ವಿಜೇತರ ಸಹಿತ 350ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು, 50ಕ್ಕೂ ಮಿಕ್ಕಿ ತೀರ್ಪುಗಾರರು, ಅಧಿಕಾರಿಗಳು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಯತೀಶ್ ಬೈಕಂಪಾಡಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಕಾರ್ಯದರ್ಶಿ ಶಿವಾನಂದ ಗಟ್ಟಿ, ಕೋಶಾಧಿಕಾರಿ ಧನಂಜಯ ಶೆಟ್ಟಿ, ತರಬೇತುದಾರ ರಾಜೇಶ್ ಖಾರ್ವಿ, ದಿನೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರನ್ನು ಗೌರವಿಸಲಾಯಿತು. ಮುಖ್ಯ ಈಜು ತರಬೇತುದಾರ ಶಿಶಿರ್ ಎಸ್. ಗಟ್ಟಿ ಸ್ವಾಗತಿಸಿದರು. ಆಶಾ ಶೆಟ್ಟಿ ವಂದಿಸಿದರು. ಚೈತ್ರಾ ಎಂ.ರಾವ್ ಕಾರ್ಯಕ್ರಮ ನಿರೂಪಿಸಿದರು.
18 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ 300ಕ್ಕೂ ಅಧಿಕ ಈಜುಪಟುಗಳು ಭಾಗವಹಿಸಿದ್ದರು.







