ತಲಪಾಡಿ: ಮನೆಗೆ ನುಗ್ಗಿ ಕಳ್ಳತನ; ಪ್ರಕರಣ ದಾಖಲು

ಉಳ್ಳಾಲ: ಮನೆಗೆ ನುಗ್ಗಿ ಕಪಾಟು ಜಾಲಾಡಿ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದ ಘಟನೆ ತಲಪಾಡಿ ಗ್ರಾಮ ಕೆಸಿನಗರ ಪಲಾಹ್ ಸ್ಕೂಲ್ ಬಳಿ ನಡೆದಿದೆ.
ಘಟನೆಯ ವಿವರ: ಎಲಿಯಾರ್ ಪದವುನಲ್ಲಿ ಅಂಗಡಿ ಹೊಂದಿದ್ದ ಅಬೂಬಕ್ಕರ್ ಅವರು 25 ವರ್ಷಗಳಿಂದ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಅಬೂಬಕ್ಕರ್ ಪತ್ನಿ, ಪುತ್ರ ಹಾಗೂ ಪುತ್ರಿ ಅವರು ಈ ಮನೆಗೆ ಬೀಗ ಹಾಕಿ ಕುಟುಂಬ ಸಹಿತ ಸೌದಿಗೆ ಹೋಗಿದ್ದರು. ಇದರ ಬಳಿಕ ಅಬೂಬಕ್ಕರ್ ಅವರ ಸಹೋದರ ನ ಪತ್ನಿ ಇಂದು ಮನೆ ನೋಡಿ ಸ್ವಚ್ಛ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮುಂಬಾಗಿಲನ್ನು ಒಡೆದು ಒಳ ನುಗ್ಗಿದ ಕಳ್ಳರು ಕೆಳ ಮಹಡಿಯಲ್ಲಿರುವ ಮೂರು ಕೊಠಡಿಗಳು ಹಾಗೂ ಮೊದಲ ಮಹಡಿಯಲ್ಲಿ ಇರುವ ಒಂದು ಕೊಠಡಿಯಲ್ಲಿರುವ ಒಟ್ಟು ನಾಲ್ಕು ಕಪಾಟುಗಳನ್ನು ಒಡೆದು ಜಾಲಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.ಅಲ್ಲದೇ ಅಡುಗೆ ಕೋಣೆ ಯ ಕಪಾಟುಗಳನ್ನು ಜಾಲಾಡಿದ ಕಳ್ಳರಿಗೆ ಚಿನ್ನಾಭರಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕಳ್ಳರು ಕಪಾಟಿನಲ್ಲಿದ್ದ ಬೆಲೆ ಬಾಳುವ ವಾಚ್, ಮೊಬೈಲ್ ಕಳವುಗೈದಿದ್ದಾರೆ.
ಈ ಮನೆಯ ಕುಟುಂಬ ವಿದೇಶಕ್ಕೆ ಹೋಗುವ ಮೊದಲೇ ಚಿನ್ನಾಭರಣಗಳನ್ನು ಸೇಫ್ ಲಾಕರ್ ನಲ್ಲಿ ಇಟ್ಟು ಹೋಗಿದ್ದರು ಎಂದು ಅಬೂಬಕ್ಕರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಚಿನ್ನಾಭರಣ ದೋಚಲು ಬಂದಿದ್ದರು: ಕಳವುಗೈದ ಆರೋಪಿಗಳು ಚಿನ್ನಾಭರಣ ದೋಚಲು ಬಂದಿದ್ದರು.ಚಿನ್ನಾಭರಣ ಸಿಗದ ಕಾರಣ ಮೊಬೈಲ್, ವಾಚ್ ಕಳವುಗೈದಿರಬೇಕು ಎಂದು ಶಂಕಿಸಲಾಗಿದೆ.ಈ ಬಗ್ಗೆ ಅಬೂಬಕ್ಕರ್ ಅವರ ಬಾವ ಶೇಖಬ್ಬ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







