ತಲಪಾಡಿ ಬಳಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ಸಹಿತ 6 ಮಂದಿ ಮೃತ್ಯು

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ಸೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಫರಂಗಿಪೇಟೆಯ ದಿವಂಗತ ಅಬ್ದುಲ್ ಖಾದರ್ ಎಂಬವರ ಪತ್ನಿ ಹವ್ವಮ್ಮ(72), ಸೊಸೆ ಕೋಟೆಕಾರ್ ಅಜ್ಜಿನಡ್ಕ ನಿವಾಸಿ ನಫೀಸಾ(52), ಮೊಮ್ಮಗಳು ಆಯಿಶ ಫಿದಾ(19), ನಫೀಸಾರ ಸಹೋದರಿ ಖದೀಜಾ(60), ಖದೀಜಾರ ಸಹೋದರನ ಪುತ್ರಿ ಹಸ್ನಾ(11) ಹಾಗೂ ರಿಕ್ಷಾ ಚಾಲಕ ಅಜ್ಜಿನಡ್ಕದ ಮುಳ್ಳುಗಡ್ಡೆ ನಿವಾಸಿ ಹೈದರ್(47) ಎಂದು ಗುರುತಿಸಲಾಗಿದೆ.
ಪೆರುಂಬಳದ ಲಕ್ಷ್ಮೀ(61) ಮತ್ತು ಆಕೆಯ ಮಗ ಸುರೇಂದ್ರ (39)ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಕುಂಜತ್ತೂರಿನಲ್ಲಿರುವ ತನ್ನ ಅಕ್ಕ ಅನಾರೋಗ್ಯಕ್ಕೀಡಾಗಿರುವ ಹಿನ್ನೆಲೆಯಲ್ಲಿ ನಫೀಸಾ ಕುಟುಂಬಸ್ಥರೊಂದಿಗೆ ಗುರುವಾರ ಮಧ್ಯಾಹ್ನ ರಿಕ್ಷಾದಲ್ಲಿ ತೆರಳುತ್ತಿದ್ದರು. ಅವರಿದ್ದ ರಿಕ್ಷಾ ಮಧ್ಯಾಹ್ನ 1:45ರ ಸುಮಾರಿಗೆ ತಲಪಾಡಿಯ ಟೋಲ್ ಗೇಟ್ ಪಕ್ಕದ ಬಸ್ ಪ್ರಯಾಣಿಕರ ತಂಗುದಾಣದ ಬಳಿ ತಲುಪಿದಾಗ ಹಿಂದುಗಡೆಯಿಂದ ಬಂದ ಕಾಸರಗೋಡಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದುತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ರಿಕ್ಷಾದಲ್ಲಿದ್ದ ಒಂದೇ ಕುಟುಂಬದ ಐವರು ಹಾಗೂ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹಿಮ್ಮುಖವಾಗಿ ಚಲಿಸಿ ಮತ್ತೆ ಅಪಘಾತ
ಮುಂದುಗಡೆಯಿಂದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಸ್ಸನ್ನು ನಿಯಂತ್ರಿಸಲು ಅದರ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ವೇಗವಾಗಿ ಹಿಮ್ಮುಖವಾಗಿ ಚಲಿಸಿದ ಬಸ್ ತಮ್ಮ ಊರಿಗೆ ತೆರಳಲು ಬಸ್‌ಗಾಗಿ ಕಾಯುತ್ತ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಕ್ಷ್ಮೀ ಮತ್ತು ಆಕೆಯ ಪುತ್ರ ಸುರೇಂದ್ರರಿ ಎಂಬರಿಗೆ ಢಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ, ಇನ್ನೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದು ಬಳಿಕ ನಿಂತಿದೆ. ಭೀಕರ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ತೀವ್ರತೆಗೆ ಆಟೊ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಾಲಕನ ವಿರುದ್ಧ ವಿಚಾರಣೆ ನಡೆಸಿ ಕಠಿಣ ಕ್ರಮ: ಕೆಎಸ್ಸಾರ್ಟಿಸಿ ಎಂ.ಡಿ.
ತಲಪಾಡಿ ಬಳಿ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ 6 ಮಂದಿ ಮೃತಪಟ್ಟ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಚಾಲಕನ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.







