ಗರೋಡಿ ಕ್ಷೇತ್ರದಲ್ಲಿ ಕೋಳಿ ಅಂಕ ನಡೆಸದಿರಲು ಆಡಳಿತ ಮಂಡಳಿ ನಿರ್ಧಾರ

ಸಾಂದರ್ಭಿಕ ಚಿತ್ರ
ಮಂಗಳೂರು,ಜ.4:ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವದ ಸಂದರ್ಭ ಕಳೆದ ಒಂದೂವರೆ ಶತಮಾನದಿಂದ ನಡೆಸಲಾಗುತ್ತಿದ್ದ ಕೋಳಿ ಅಂಕವನ್ನು ಈ ಬಾರಿ ನಡೆಸದಿರಲು ಆಡಳಿತ ಮಂಡಳಿ ತೀರ್ಮಾನನಿಸಿದೆ.
ಪೊಲೀಸ್ ಇಲಾಖೆಯು ಕೆಲವು ಷರತ್ತುಗಳನ್ನು ಸೂಚಿಸಿದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ 15 ದಿನದಿಂದ ಪೊಲೀಸ್ ಇಲಾಖೆ ಹಾಗೂ ಎಲ್ಲಾ ಪಕ್ಷಗಳ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅನುಮತಿ ಸಿಕ್ಕಿಲ್ಲ. ಪೊಲೀಸರು ಷರತ್ತು ವಿಧಿಸಿ ಕೋಳಿ ಅಂಕ ನಡೆಸುವಂತೆ ಸೂಚಿಸಿದ್ದಾರೆ. ಹಾಗಾಗಿ ಕೋಳಿ ಅಂಕ ನಿಲ್ಲಿಸಲಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ತಿಳಿಸಿದ್ದಾರೆ.
ಕೋಳಿ ಅಂಕದ ನೆಪದಲ್ಲಿ ಜೂಜಾಟಕ್ಕೆ ಅವಕಾಶ ಇಲ್ಲ ಎಂದು ಈಗಾಗಲೇ ಕ್ಷೇತ್ರದ ಆಡಳಿ ಮಂಡಳಿಯವರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಜೂಜಾಟ ಕಂಡು ಬಂದರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದೆವು. ಕ್ಷೇತ್ರದ ಸಂಪ್ರದಾಯದ ಪ್ರಕಾರ ಪ್ರತಿ ವರ್ಷ ಕೋಳಿ ಅಂಕ ನಡೆಸಲು ಅವಕಾಶ ಕೊಡಿ ಎಂದು ಆಡಳಿತ ಮಂಡಳಿಯವರು ಕೇಳಿದ್ದರು. ಸೀಮಿತ ಅವಧಿಯಲ್ಲಿ ನಿಕಟ ಮೇಲ್ವಿಚಾರಣೆಯಲ್ಲಿ ಸಂಪ್ರದಾಯ ಪಾಲಿಸಬಹುದು. ಆದರೆ ಜೂಜಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.







