ಕೆಪಿಎಸ್ ಹೆಸರಲ್ಲಿ ಶಾಲಾ ವಿಲೀನದ ಪ್ರಕ್ರಿಯೆ ಕ್ರಮ ಸರಿಯಲ್ಲ : ಜಮಾಅತೆ ಇಸ್ಲಾಮಿ ಹಿಂದ್

ಬೆಂಗಳೂರು: ಆಯ್ದ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ನೂತನ 700 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸುವ ಸರಕಾರದ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣ ಹಕ್ಕು ಮೊಟಕುಗೊಳ್ಳುವ ಆತಂಕವಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಹೇಳಿದೆ.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಇದರ ನಿಯೋಗವು ಮಂಗಳವಾರದಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರಿಗೆ ಈ ಕುರಿತು ಮನವಿ ಸಲ್ಲಿಸಿದೆ.
ಕೆಪಿಎಸ್ ಶಾಲೆಗಳ ಹೆಸರಿನಲ್ಲಿ 1 ರಿಂದ 5 ಕಿ.ಮೀ ವ್ಯಾಪ್ತಿಯ ಒಳಗಿನ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ಇತರ ಶಾಲೆಯೊಂದಿಗೆ ಜೋಡಿಸುವ ವಿಲೀನದ ಪ್ರಕ್ರಿಯೆಯೂ ಶಿಕ್ಷಣ ಹಕ್ಕು ಕಾಯ್ದೆಯ ನೆರೆಹೊರೆ ಶಾಲಾ ಪದ್ಧತಿಗೆ ವಿರುದ್ಧವಾಗಿದೆ, ಇದರಿಂದ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಇಲಾಖೆಗೆ ಆಯೋಗವು ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳಿಗೆ ಪೂರಕವಾಗಿದೆಯೇ ಎಂಬುದರ ಬಗ್ಗೆ ವಿಸ್ತೃತ ವರದಿ ಪಡೆದುಕೊಂಡು ಮತ್ತು ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕರೊಂದಿಗೆ ಸಮಾಲೋಚಿಸಿ ನಂತರದಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದೆ.
700 ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ನಡೆಯುವ ವಿಲೀನದ ಪ್ರಕ್ರಿಯೆಯಲ್ಲಿ ಅಂದಾಜು 25683 ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಬಂದ್ ಆಗುವ ಸಾಧ್ಯತೆ ಇವೆ, ಇದು ಬಹುದೊಡ್ಡ ಶೈಕ್ಷಣಿಕ ಪ್ರಮಾದ ವಾಗಲಿದ್ದು, ಈ ಬಗ್ಗೆ ಆಯೋಗವು ಮಕ್ಕಳ ಶಿಕ್ಷಣ ಹಕ್ಕಗಳ ಪರವಾಗಿ ವಕಾಲತ್ತು ವಹಿಸಬೇಕೆಂದು ಆಗ್ರಹಿಸಲಾಯಿತು.
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸಿರುವ ಆದೇಶದಿಂದ ಹಳ್ಳಿಗಳ ಶಾಲೆಗಳು ಅತಂತ್ರವಾಗಲಿವೆ, ಶಿಕ್ಷಣ ಹಕ್ಕು ಕಾಯ್ದೆಯ ನೆರೆಹೊರೆ ಶಾಲಾ ಪದ್ಧತಿಗೆ ವಿರುದ್ಧವಾಗಿ ಶಾಲಾ ಸಮುಚ್ಚಯವನ್ನು ರೂಪಿಸುವ ಇಲಾಖೆಯ ಈ ಚಿಂತನೆಯೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ, ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿರುವ ಸರಕಾರಿ ಶಾಲೆಗಳು ಇನ್ನೂ ಮುಂದೆ ಶಾಲೆಗಳಿಲ್ಲದ ಹಳ್ಳಿಗಳನ್ನಾಗಿ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಟ್ಟು, ಆಯ್ದ ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸು ವುದು ಉತ್ತಮ, ಈ ಬಗ್ಗೆ ಸೂಕ್ತ ನಿರ್ಧಾರವನ್ನು ಸರ್ಕಾರವೂ ತೆಗೆದುಕೊಳ್ಳುವಂತೆ ಆಯೋಗವು ಒತ್ತಡ ಹೇರಬೇಕು ಆ ಮೂಲಕ ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದೆ.
ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ, ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮತ್ತು ಮಹ್ಮದ್ ಪೀರ್ ಲಟಗೇರಿ ಇದ್ದರು.







