ಶ್ರೀಕ್ಷೇತ್ರ ಧರ್ಮಸ್ಥಳದ ರಕ್ಷಣೆಗೆ ರಾಜ್ಯ ಸರಕಾರ ಇದೆ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು, ಆ.31: ಶ್ರೀಕ್ಷೇತ್ರ ಧರ್ಮಸ್ಥಳದ ರಕ್ಷಣೆಗೆ ದೊಡ್ಡ ಸಮಾವೇಶ ಅನತ್ಯ. ಶ್ರೀ ಮಂಜುನಾಥ ಸ್ವಾಮಿಗೆ ಇಂತಹ ಸಮಾವೇಶ ಬೇಕಾಗಿಲ್ಲ. ಶ್ರೀಕ್ಷೇತ್ರದ ರಕ್ಷಣೆಗೆ ಕರ್ನಾಟಕ ಸರಕಾರ ಇದೆ, ನಾವು ಇದ್ದೇವೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ರವಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಸೆ.1ರಂದು ಆಯೋಜಿಸಿರುವ ‘ಧರ್ಮಸ್ಥಳ ಚಲೋ’ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹರಸಾಹಸ ಎಂದರು.
ಬಿಜೆಪಿಯವರಿಗೆ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಏನಾದರೂ ವಿವಾದ ಬೇಕು. ಆ ಕಾರಣಕ್ಕಾಗಿ ಧರ್ಮಸ್ಥಳ ವಿಚಾರವನ್ನು ಕೈಗೆತ್ತಿಕೊಂಡು ರಾಜಕೀಯ ಮಾಡುತ್ತಿದೆ . ಇದರಲ್ಲಿ ರಾಜ್ಯದ ಹಿತವೂ ಇಲ್ಲ, ಜನತೆಯ ಹಿತವೂ ಇಲ್ಲ. ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಕರ್ನಾಟಕಕ್ಕೆ ಬರಬೇಕಾದ ಅನುದಾನ ತರಿಸಿಕೊಡುವ ಪ್ರಯತ್ನ ಮಾಡಲಿ, ಸ್ವಾರ್ಥ ರಾಜಕಾರಣವನ್ನು ರಾಜ್ಯದ ಜನತೆಯ ಪರವಾಗಿ ಹೋರಾಡಲಿ ಎಂದರು.
ಬಿಜೆಪಿ ಕೇವಲ ಧಾರ್ಮಿಕ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಅದರ ಉದ್ದೇಶ ಏನು ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ನುಡಿದರು.
ವಿಶೇಷ ತನಿಖಾ ತಂಡ ಧರ್ಮಸ್ಥಳ ವಿಚಾರದಲ್ಲಿ ತನಿಖೆಗೆ ಸಮರ್ಥವಾಗಿದೆ. ಅದರ ಪಾಡಿಗೆ ತನಿಖೆಯನ್ನು ಮುಂದುವರಿಸಿ ನಿಜಾಂಶವನ್ನು ಹೊರ ತರಲಿದೆ. ಎಸ್‌ಐಟಿ ತನಿಖೆ ನಡೆಸುತ್ತಿರುವಾಗ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟರೆ ಹೇಗೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಬಿಜೆಪಿಯವರಿಗೆ ರಾಜಕೀಯ ಲಾಭ ಮಾಡಿಕೊಳ್ಳಲು ಈಗ ಯಾವ ವಿಷಯವೇ ಇಲ್ಲದೆ ಇರುವುದರಿಂದ ರಾಜ್ಯ ಸರಕಾರದ ಮೇಲೆ ಕೆಟ್ಟ ಹೆಸರು ತರಬೇಕು ಎಂಬ ಏಕೈಕ ಉದ್ದೇಶದಿಂದ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಸೌಜನ್ಯ ಪ್ರಕರಣದಲ್ಲಿ ಯಾಕೆ ನ್ಯಾಯ ಒದಗಿಸಿಲ್ಲ, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಗುಂಡೂರಾವ್ ಅವರು ಎಸ್‌ಐಟಿ ತಂಡವು ಯಾವ ಹಸ್ತಕ್ಷೇಪ ಇಲ್ಲದೆ ತನಿಖೆ ನಡೆಸುತ್ತಿದೆ. ಈ ತಂಡ ನಿಜಾಂಶವನ್ನು ಹೊರತರಲಿದೆ ಎಂಬ ವಿಶ್ವಾಸ ನಮಗೆ ಇದೆ. ತನಿಖೆಗೆ ಎನ್‌ಐಎ ಬೇಕಾಗಿಲ್ಲ. ಬಿಜೆಪಿಯ ಬೆಂಬಲವೂ ಬೇಕಾಗಿಲ್ಲ. ನಮಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ ಎಂದರು.
ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ನಡೆದಾಗ ಬಿಜೆಪಿ ಸರಕಾರವೇ ಇತ್ತು. ಅವರು ಏನು ಮಾಡಿದ್ರು ? ಪ್ರಕರಣದಲ್ಲಿ ನ್ಯಾಯ ಒದಗಿಸಿದೆ ಮೌನವಾಗಿದ್ದ ಅವರು ಈಗ ಅನಗತ್ಯವಾಗಿ ಆಧಾರ ರಹಿತವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ವಿರುದ್ಧ ಷಡ್ಯಂತರ, ಫಾರಿನ್ ಫಂಡಿಂಗ್ ಇದೆ ಎಂಬ ಆರೋಪವನ್ನು ನಿರಾಕರಿದರು. ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಕೊಡೋದೆ ಇಲ್ಲ ಅಂತ ನಾನು ಹೇಳ್ತಿಲ್ಲ. ಆದರೆ ಅಂತಹ ನಿಖರ ಮಾಹಿತಿ ದೊರೆತರೆ ಸರಕಾರ ಯೋಚಿಸಲಿದೆ. ಕೊಡಬೇಕಾದರೆ ನಿಜವಾದಂತಹ ಮಾಹಿತಿಗಳು , ಸರಿಯಾದ ಸಾಕ್ಷ್ಯಾಧಾರಗಳು ಸಿಗಲಿ ಎಂದು ತಿಳಿಸಿದರು.
ಸಮಾವೇಶ ಮಾಡಲಿ ನಮ್ಮ ಆಕ್ಷೇಪ ಇಲ್ಲ
ಬಿಜೆಪಿ ಧರ್ಮಸ್ಥಳದಲ್ಲಿ ಸಮಾವೇಶ ಮಾಡುವುದಿದ್ದರೆ ಮಾಡಲಿ, ಇದು ಪ್ರಜಾಪ್ರಭುತ್ವ ರಾಷ್ಟ್ರ. ಅಭಿಪ್ರಾಯ ತಿಳಿಸಲು ಎಲ್ಲರಿಗೆ ಹಕ್ಕಿದೆ. ಆದರೆ ಬಿಜೆಪಿಯ ಉದ್ದೇಶ ಮಾತ್ರ ಸರಿ ಇಲ್ಲ. ತಲ್ಲಣ ಮಾಡುವುದಕ್ಕೆ ಇರುವ ಪಕ್ಷ ಬಿಜೆಪಿ ಆಗಿದೆ. ಬಿಜೆಪಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ ಎಂದು ದಿನೇಶ್ ಗುಂಡೂರಾವ್ ಕುಟುಕಿದರು
ಗಣೇಶೋತ್ಸವಕ್ಕೆ ಧ್ವನಿವರ್ಧಕ ಬಳಕೆ ನಿರ್ಬಂಧದಿಂದ ಕೆಲವೆಡೆ ಸಮಸ್ಯೆ ಆಗಿದೆ ಎಂಬ ಮಾಹಿತಿ ಇದೆ. ಅದನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿ, ಸರಿಪಡಿಸುವ ಪ್ರಯತ್ನ ಮಾಡುವುದಾಗಿ ಸಚಿವ ದಿನೇಶ್ ಗುಂಡೂ ರಾವ್ ತಿಳಿಸಿದರು.







