ತುಳುನಾಡಿನ ಜನಪದ ಧರ್ಮವನ್ನು ಪ್ರತಿಪಾದಿಸುವ ಅವಶ್ಯಕತೆ ಇದೆ : ಡಾ. ಗಣನಾಥ ಶೆಟ್ಟಿ ಎಕ್ಕಾರು

ಮಂಗಳೂರು: ತುಳು ನಾಡಿನ ಜನಪದವೇ ಕೃಷಿ ಸಂಸ್ಕೃತಿ, ಅವೈದಿಕ ಆಚರಣೆಗಳು, ಮಾತೃಮೂಲಿ ಪದ್ಧತಿ ಮೊದಲಾದ ಮೂಲ ಅಂಶಗಳನ್ನು ಹೊಂದಿದೆ. ಇಂದಿನ ಈ ಕಾಲಮಾನದಲ್ಲಿ ಮನುಷ್ಯತ್ವವನ್ನು ಪ್ರೀತಿಸುವ ಜನಪದ ಧರ್ಮವನ್ನು ಪ್ರತಿಪಾದಿಸುವ ಅವಶ್ಯಕತೆ ಇದೆ ಎಂದು ಜನಪದ ವಿದ್ವಾಂಸರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.
ಸಮುದಾಯ ಮಂಗಳೂರು ಇದರ ಎಂಟನೇ ಸಮ್ಮೇಳನದ ಅಂಗವಾಗಿ ನಡೆದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಇವರು ಮಾತನಾಡಿದರು.
ಕಾಲದಿಂದ ಕಾಲಕ್ಕೆ ಬದಲಾಗುವ ಮೌಖಿಕ ಪರಂಪರೆ, ನಿರ್ದಿಷ್ಟ ಪಡಿಸಲು ಸಾಧ್ಯವಿಲ್ಲದ ವಿಚಾರಗಳು, ಕ್ರಿಯಾಶೀಲತೆ ಯೊಂದಿಗೆ ಹೊಂದಿರುವ ಸಂಬಂಧಗಳು ಮತ್ತು ನಿರಂತರ ಚಲನಶೀಲತೆಯೇ ಜನಪದದ ಲಕ್ಷಣವಾಗಿದೆ. ಜನಪದ ಸಂಸ್ಕೃತಿಗೆ ಶಾಸ್ತ್ರೀಯತೆಯಲ್ಲಿ ಇರುವಂತೆ ಕಟ್ಟುಪಾಡುಗಳು ಇಲ್ಲ. ಅವುಗಳು ಜನತೆಯ ಬದುಕಿನೊಂದಿಗೆ ಬೆಳೆಯು ವಂತದ್ದು ತುಳುನಾಡಿನ ಜನಪದವು ಇದಕ್ಕೆ ಹೊರತಾಗಿಲ್ಲ ತುಳುವರ ಎಲ್ಲರ ಆಚರಣೆಗಳು ಕೂಡ ಒಂದೇ ರೀತಿ ಇದೆ. ಈ ಜನಪದವನ್ನು ಉಳಿಸಬೇಕಾಗಿದೆ.ತುಳುನಾಡಿನ ಈ ಜನಪದಕ್ಕೂ ವೈದಿಕ ಆಚರಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಸಮುದಾಯ ಮಂಗಳೂರು ಅಧ್ಯಕ್ಷರಾದ ಪ್ರೊ. ರಾಜೇಂದ್ರ ಉಡುಪ, ಸಮುದಾಯ ಕರ್ನಾಟಕದ ಜೊತೆ ಕಾರ್ಯದರ್ಶಿ ಯಾದ ಉದಯ್ ಗಾಂವ್ಕರ್ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಸಮುದಾಯ ಕರ್ನಾಟಕದ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.





