ಮಂಗಳೂರಿನಲ್ಲಿ ‘ಡಾಟಾ ಸೆಂಟರ್’ಗೆ ಚಿಂತನೆ: ಡಾ. ಮಂಜುಳಾ

ಮಂಗಳೂರು, ಅ. 31: ಬೆಂಗಳೂರಿನಂತೆ ಮಂಗಳೂರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಬ್ (ಐಟಿ) ಆಗಿಸುವ ಪ್ರಯತ್ನದಲ್ಲಿ ಸರಕಾರ ಐಟಿ ಪಾರ್ಕ್ ಘೋಷಿಸಿದೆ. ಇದಕ್ಕೆ ಪೂರಕವಾಗಿ ಡಾಟಾ ಸೆಂಟರ್ ಸ್ಥಾಪನೆಗೆ ಚಿಂತನೆ ಇದೆ ಎಂದು ಸರಕಾರದ ಐಟಿ ಮತ್ತು ಬಿಟಿ, ಇಲೆಕ್ಟ್ರಾನಿಕ್ಸ್ ವಿಭಾಗದ ಕಾರ್ಯದರ್ಶಿ ಡಾ. ಮಂಜುಳಾ ಎನ್. ತಿಳಿಸಿದ್ದಾರೆ.
ಮಂಗಳೂರಿನ ಮಾಲೆಮಾರ್‌ನ ವರ್ಕ್‌ವರ್ಕ್ ಟ್ರಯಾಂಗಲ್ ಸಂಸ್ಥೆಯಲ್ಲಿ ಶುಕ್ರವಾರ ಐಟಿ ಉದ್ಯಮಿಗಳ ಜತೆ ಮಾತುಕತೆ ನಡೆಸಿದ ಬಳಕ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಮಂಗಳೂರು ಕೂಡಾ ಐಟಿ ಕ್ಷೇತ್ರದತ್ತ ದಾಪುಗಾಲಿಡುತ್ತಿದೆ. ಗೇಮಿಂಗ್, ಸ್ಟಾರ್ಟ್‌ಅಪ್‌ಗಳು ಇಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ತೆರೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಐಟಿ ಉದ್ದಿಮೆಗಳಿಗೆ ಪೂರಕವಾಗಿ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಡಾಟಾ ಸೆಂಟರ್‌ನ ಸ್ಥಾಪನೆ ಮಂಗಳೂರಿನಲ್ಲಿ ಅಗತ್ಯವಿದೆ. ಇದರ ಜತೆಗೆ ಬೆಂಗಳೂರಿನಲ್ಲಿರುವಂತೆ ಸೆಂಟರ್ ಫಾರ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆಯ ಬಗ್ಗೆಯೂ ಚಿಂತನೆ ಇದೆ ಎಂದವರು ಹೇಳಿದರು.
ಸರಕಾರ ಈಗಾಗಲೇ ಮಂಗಳೂರಿನಲ್ಲಿ ಕಿಯೋನಿಕ್ಸ್ ಜಾಗದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಎರಡು ವರ್ಷಗಳಲ್ಲಿ ಅಗತ್ಯ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಸುಮಾರು 135 ಕೊಟಿ ರೂ. ವೆಚ್ಚದಲ್ಲಿ ಈ ಐಟಿ ಪಾರ್ಕ್ ನಿರ್ಮಾಣ ಉದ್ಯೋಗ ಸೃಷ್ಟಿಯ ಜತೆಗೆ ಇಲ್ಲಿನ ಐಟಿ ಕ್ಷೇತ್ರದ ಪ್ರತಿಭೆಗಳಿಗೆ ಊರಿನಲ್ಲೇ ಉದ್ಯೋಗ ಸೃಷ್ಟಿಸಲು ಅವಕಾಶ ಕಲ್ಪಿಸಲಿದೆ. ಐಟಿ ಪಾರ್ಕ್ ನಿರ್ಮಾಣದ ಜತೆಗೆ ಅಗತ್ಯ ಮೂಲಭೂತ ಸೌಕರ್ಯಗಳಿಗೂ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಫುಲ ಅವಕಾಶ ಹಾಗೂ ಸಾಮರ್ಥ್ಯದ ಕುರಿತಂತೆ ಇಲ್ಲಿನ ಐಟಿ ಉದ್ದಿಮೆದಾರರ ಜತೆ ಚರ್ಚಿಸಲಾಗಿದೆ. ಸಾಕಷ್ಟು ಕೆಲಸ ಆಗುತ್ತಿದೆ. ಪ್ರತಿ ವರ್ಷ ಕರಾವಳಿ ಭಾಗದಲ್ಲಿ 10000ದಷ್ಟು ಇಂಜಿನಿಯರ್‌ಗಳು, 35000ದಷ್ಟು ಪದವೀಧರರು ಶಿಕ್ಷಣ ಸಂಸ್ಥೆಗಳಿಂದ ಹೊರಬರುತ್ತಿದ್ದಾರೆ. ಇಲ್ಲಿ ಐಟಿ ಕ್ಷೇತ್ರ ವಿಸ್ತಾರಗೊಂಡಷ್ಟು ವಿವಿಧ ರಾಜ್ಯ ಹಾಗೂ ಹೊರ ದೇಶಗಳಿಗೆ ಪಲಾಯನಗೊಳ್ಳುವುದಕ್ಕೆ ತಡೆ ಬೀಳಲಿದೆ ಎಂದರು.
ರೋಬೋ ಸಾಫ್ಟ್ ಸಂಸ್ಥೆಯ ಸಂಸ್ಥಾಪಕ, ವರ್ಕ್‌ವರ್ಕ್ ಸಂಸ್ಥೆಯ ಪ್ರಮುಖರಾದ ರೋಹಿತ್ ಭಟ್‌ರವರು ಮಾತ ನಾಡಿ, ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಯು ಹೂಡಿಕೆದಾರರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ಸರಕಾರವೇ ಐಟಿ ಕ್ಷೇತ್ರದ ಅಭಿವೃದ್ಧಿಗೆ ಮುಂದಡಿ ಇಟ್ಟಿರುವುದು ಉತ್ತಮ ಬೆಳವಣಿಗೆ. ಈಗಾಗಲೇ ಖಾಸಗಿ ಸಂಸ್ಥೆಗಳು ಕರಾವಳಿ ಯಲ್ಲಿ ಐಟಿ ಕ್ಷೇತ್ರವನ್ನು ವಿಸ್ತರಿಸುವಲ್ಲಿ ಸಾಕಷ್ಟು ಕೆಲಸ ಕಾರ್ಯ ನಡೆಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ 40 ಹೊಸ ಕಂಪನಿಗಳು ಇಲ್ಲಿಗೆ ಬಂದಿವೆ. ಸುಮಾರು 8000 ಉದ್ಯೋಗ ಸೃಷ್ಟಿಯಾಗಿವೆ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಕರಾವಳಿಯನ್ನು ಭಾರತದ ಸಿಲಿಕಾನ್ ಬೀಚ್ ಸಿಟಿಯಾಗಿ ಪರಿವರ್ತಿಸುವಲ್ಲಿ ಈಗಾಗಲೇ ಖಾಸಗಿ ಐಟಿ ಸಂಸ್ಥೆಗಳವರು ಪ್ರಯತ್ನಿ ಸುತ್ತಿದ್ದಾರೆ. ಹಲವು ವಿದೇಶಿ ಕಂಪನಿಗಳು ಈಗಾಗಲೇ ಇಲ್ಲಿ ಬಂದಿದ್ದು, ಸಾಕಷ್ಟು ಉದ್ಯೋಗ ಸೃಷ್ಟಿಗೆ ಕಾರಣ ವಾಗಿದೆ. ಸುಮಾರು ಎಂಟು ಬೃಹತ್ ಐಟಿ ಸಂಸ್ಥೆಗಳಲ್ಲಿ 1000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಡಾಟಾ ಸೆಂಟರ್ ಹಬ್ ಮೂಲಕ ಗೇಮಿಂಗ್ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂದರು.







