ಒಲಿಂಪಿಕ್ಸ್‌ಗೆ ಪ್ರೋತ್ಸಾಹ ನೀಡಲು 60 ಕ್ರೀಡಾಪಟುಗಳಿಗೆ ತರಬೇತಿ: ಸಿಎಂ ಸಿದ್ದರಾಮಯ್ಯ

ಮಂಗಳೂರು: ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ಒಲಿಂಪಿಕ್ ಕೀಡೆಗಳಲ್ಲಿ ಪದಕ ಬಂದರೆ ಅದು ದೇಶಕ್ಕೆ ಹೆಮ್ಮೆ. ಹಾಗಾಗಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಆಯ್ದ 60 ಜನರಿಗೆ ಒಲಿಂಪಿಕ್ಸ್ ಕ್ರೀಡೆಗಳಿಗೆ ತರಬೇತಿ ನೀಡಲು ತಲಾ 10 ಲಕ್ಷ ರೂ. ನೀಡಲು ಸರಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನ ಉರ್ವಾದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಅವರು ‘ಮುಖ್ಯಮಂತ್ರಿಗಳ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2025’ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆಯಲ್ಲಿ ದೇಶ ಜಗತ್ತಿನಲ್ಲೇ ನಂಬರ್ ವನ್ ಸ್ಥಾನದಲ್ಲಿದೆ. ಆದರೆ ಒಪಿಂಪಿಕ್ ಪದಕಗಳಲ್ಲಿ ಹಿಂದಿದೆ. ಹಾಗಾಗಿಯೇ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಒಲಿಂಪಿಕ್ಸ್, ಪ್ಯಾರಾ ಒಲಿಪಿಂಕಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಶೇ. 2ರಷ್ಟು ಉದ್ಯೋಗಾವಕಾಶ ಮೀಸಲಿಡಲಾಗುವುದು. ಜತೆಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದರೆ 5 ಕೋಟಿ ರೂ., ಬೆಳ್ಳಿ ಪಡೆದರೆ 3 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆದರೆ 2 ಕೋಟಿ ರೂ. ಸರಕಾರ ನೀಡಲಿದೆ. ಈ ಮೂಲಕ ಕ್ರೀಡೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಡಿವೈಎಸ್ಪಿ ಸೇರಿ ಇತರ ಪೊಲೀಸ್ ಹುದ್ದೆಗಳಲ್ಲೂ ಶೇ. 2ರಷ್ಟಿದ್ದ ಉದ್ಯೋಗ ಮೀಸಲಾತಿಯನ್ನು ಶೇ. 3ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.
ಬಾಡ್ಮಿಂಟನ್ ಆಟ ಆರೋಗ್ಯ ರಕ್ಷಣೆಗಾಗಿ ಆಡಲಾಗುತ್ತದೆ. ಪ್ರಕಾಶ್ ಪಡುಕೋಣೆ. ಪುಲ್ಲೇಲ ಗೋಪಿಚಂದ್ ಅವರು ದೇಶದಲ್ಲಿ ಬಾಡ್ಮಿಂಟನ್ ಗೆ ಅಡಿಪಾಯ ಹಾಕಿದವರು. ಇತ್ತಿಚಿನ ವರ್ಷಗಳಲ್ಲಿ ಸೈನಾ, ಪಿವಿ ಸಿಂಧೂ ಒಲಿಂಪಿಕ್ ನಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಶೋಕ್ ಪೂವಯ್ಯ ಹಾಗೂ ಅರುಣ್ ಪೂವಯ್ಯ ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಕ್ರೀಡಾಪಟುಗಳು ಮಂಗಳೂರಿನಿಂದಲೂ ಹೊರ ಬರಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.
ದಕ ಜಿಲ್ಲೆಯ ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯ ಮೊದಲ ಬಾರಿ ನಡೆಯುತ್ತಿದೆ. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಹಿಂದಿನ ಅವಧಿಯಲ್ಲಿ ಅಡಿಗಲ್ಲು ಹಾಕಿದ್ದು ನಾನೇ. ಈ ಬಾರಿ ಉದ್ಘಾಟನೆ ಮಾಡಿದ್ದು ನಾನೇ. ಅಡಿಗಲ್ಲು ಹಾಕಿದಾಗ 35 ಕೋಟಿ ರೂ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಬಿಜೆಪಿ ಬಂದು 20 ಕೋಟಿಗೆ ಇಳಿಕೆ ಮಾಡಿ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಲಿಲ್ಲ. ನಾನು ಮತ್ತೆ ಸಿಎಂ ಆಗಿ ಕ್ರೀಡಾಂಗಣ ಪೂರ್ಣಗೊಳಿಸಿದ್ದೇನೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವ್ಯವಸ್ಥೆ ಮಂಗಳೂರಿನ ಉರ್ವಾದ ಈ ಒಳಾಂಗಣ ಕ್ರೀಡಾಂಗಣದ ಮೂಲಕ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಂತೆ ಮಂಗಳೂರು ಬೆಳೆಯಬೇಕಿದ್ದು, ಈ ನಿಟ್ಟಿನಲ್ಲಿ ಕ್ರೀಡೆಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸರ್ಫಿಂಗ್, ಗಾಳಿಪಟ ಉತ್ಸವದ ಜತೆಗೆ ಕ್ರೀಡೆ, ಸಂಸ್ಕೃತಿ, ಪ್ರವಾಸೋದ್ಯಮವನ್ನು ಜೋಡಿಸಿಕೊಂಡರೆ ಮಂಗಳೂರು ನಗರದ ಬೆಳವಣಿಗೆ ವೇಗ ಪಡೆಯಲಿದೆ ಎಂದವರು ಹೇಳಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಮನೋಜ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷ ಸೀನಿಯರ್ ಚಾಂಪಿಯನ್‌ಶಿಪ್ ಮಾಡಲು ರಾಜ್ಯ ಸರಕಾ ಅವಕಾಶ ನೀಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದ ಬಾಡ್ಮಿಂಟನ್ ಸ್ಪರ್ಧೆ ಸರಕಾರದ ಸಹಕಾರದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಉತ್ಕೃಷ್ಟ ಮಟಟದ ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್ ಮಾಡಲು ಅಸೋಸಿಯೇಶನ್ ಮುಂದಾಗಿದೆ ಎಂದರು.
ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯ ಚಂದ್ರಜೈನ್, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಅಜಯ್ ಸಿಂಗ್, ಅಶೋಕ್ ಪಟ್ಟಣ್ಣ, ನಝೀರ್ ಅಹಮ್ಮದ್, ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ತೆಕ್ಕಿಲ್, ಪ್ರಮುಖರಾದ ಲಾವಣ್ಯ ಬಳ್ಳಾಲ್, ವಿಶ್ವಾಸ್ ಕುಮಾರ್ ದಾಸ್, ಶಶಿಧರ ಹೆಗ್ಡೆ, ಪದ್ಮರಾಜ್, ಮನೋಜ್ ಕುಮಾರ್, ಎಂ.ಪಿ. ರವೀಂದ್ರ, ಹಿರಿಯ ಅಧಿಕಾರಿಗಳಾದ ಎಲ್.ಕೆ. ಅತೀಕ್, ಚೇತನ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದ ಸಾಧಕರಾದ ಅರುಣ್ ಪೂವಯ್ಯ ಹಾಗೂ ಅಶೋಕ್ ಪೂವಯ್ಯರನ್ನು ಸನ್ಮಾನಿಸಲಾಯಿತು.
‘ಬಾಡ್ಮಿಂಟನ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದು. ಹೈ ಸ್ಕೂಲ್‌ನಲ್ಲಿ ನಾನೂ ಬ್ಯಾಡ್ಮಿಂಟನ್ ಆಡುತ್ತಿದ್ದೆ. ಕಬಡ್ಡಿ, ಫುಟ್ಬಾಲ್ ಸೇರಿ ಎಲ್ಲಾ ಆಟ ಕೂಡಾ ಆಡುತ್ತಿದ್ದೆ. ಆದರೆ ಯಾವುದರಲ್ಲೂ ಪರಿಣತಿ ಪಡೆದಿಲ್ಲ. ಹಾಗಾಗಿ ಕ್ರೀಡೆಯಲ್ಲಿ ನಾನು ಮುಂದೆ ಬರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡರು.
ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆತಿಥ್ಯದಲ್ಲಿ ನ.2ರವರೆಗೆ ಚೀಫ್ ಮಿನಿಸ್ಟರ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ ನಡೆಯಲಿದ್ದು, ಸುಮಾರು 450ಕ್ಕೂ ಅಧಿಕ ಮಂದಿ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಯುಎಸ್ ಎ, ಯುಎಇ, ಇಂಗ್ಲೆಂಡ್, ಕೆನಡಾ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲಂಡ್ ಸೇರಿದಂತೆ ಸುಮಾರು 12 ರಾಷ್ಟ್ರಗಳ 48 ವಿದೇಶಿ ಕ್ರೀಡಾಪಟುಗಳು ಭಾಗವಹಿಸುತ್ತಿ ದ್ದಾರೆ. ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್, ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಿಕ್ಸ್ ಡ್ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ವಿವಿಧ ಭಾಗಗಳಿಂದ ಆಗಮಿಸಿದ ಆಟಗಾರರು ಸೋಮವಾರ ಅಭ್ಯಾಸನಿರತರರಾಗಿದ್ದು, ಆಟಗಾರರಿಗೆ ಆಯೋಜಕರಿಂದಲೇ ಊಟೋಪಚಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನುರಿತ ತೀರ್ಪುಗಾರರನ್ನು ನೇಮಕ ಮಾಡಲಾಗಿದ್ದು, ಮಾಲ್ಡಿವ್ಸ್ ಮೂಲದ ಅಲಿ ಮುಖ್ಯ ತೀರ್ಪುಗಾರರಾಗಿದ್ದಾರೆ. ರಾಜೀವ್ ಮೆಹ್ತಾ, ರಾಜೇಶ್ ಶೇಖರ್ ಮತ್ತು ಬಾಲ ಅವರು ಮುಖ್ಯ ಅಂಪಾಯರ್‌ಗಳಾಗಿ ಸಹಕರಿಸಲಿದ್ದಾರೆ.







