ದ್ವಿಚಕ್ರ ವಾಹನ ಪರಸ್ಪರ ಢಿಕ್ಕಿ: ಗಾಯಾಳು ಮಹಿಳೆ ಮೃತ್ಯು

ಪುತ್ತೂರು: 2 ದಿನಗಳ ಹಿಂದೆ ದ್ವಿಚಕ್ರ ವಾಹಗಳು ಎರಡರ ನಡುವೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ನಿವಾಸಿ ಸಯ್ಯದ್ ಆಲಂ ಎಂಬವರ ಪತ್ನಿ ಅಫ್ಸಾ(54) ಮೃತಪಟ್ಟ ಮಹಿಳೆ. ಶುಕ್ರವಾರ ರಾತ್ರಿ ಅಸ್ಲಾಂ ದಂಪತಿ ಪೇಟೆಯ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಸ್ಕೂಟರ್ ಮತ್ತು ಮುಂಭಾಗದಿಂದ ಆಗಮಿಸುತ್ತಿದ್ದ ಇನ್ನೊಂದು ಸ್ಕೂಟರ್ ಪರ್ಲಡ್ಕ ಜಂಕ್ಷನ್‌ನಲ್ಲಿ ಪರಸ್ಪರ ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸಯ್ಯದ್ ಆಲಂ ಮತ್ತು ಅಫ್ಸಾ ಹಾಗೂ ಇನ್ನೊಂದು ಸ್ಕೂಟರ್‌ನಲ್ಲಿದ್ದ ಸವಾರ ಮಹಮ್ಮದ್ ಮುಝಮ್ಮಿಲ್(19) ಮತ್ತು ಸಹ ಸವಾರ ಮಹಮ್ಮದ್ ನವೀದ್(18) ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದರು. ಈ ಪೈಕಿ ಗಂಭೀರ ಗಾಯಗೊಂಡಿದ್ದ ಸಯ್ಯದ್ ಆಲಂ, ಅಫ್ಸಾ ಮತ್ತು ನವೀದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಫ್ಸಾ ಮೃತಪಟ್ಟಿದ್ದಾರೆ. ಸಯ್ಯದ್ ಆಲಂ ಮತ್ತು ನವೀದ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಘಟನೆಗೆ ಕಾರಣವಾದ ರಸ್ತೆ ಗುಂಡಿ:
ಪುತ್ತೂರು ನಗರಕ್ಕೆ ಸಂಪರ್ಕಿಸುವ ಈ ರಸ್ತೆಯು ಪರ್ಲಡ್ಕ ಜಂಕ್ಷನ್‌ನಲ್ಲಿ ಹೊಂಡಗಳಿಂದ ಕೂಡಿದ್ದು, ಈ ಗುಂಡಿಗಳೇ ಘಟನೆಗೆ ಕಾರಣವಾಗಿದೆ. ಸಯ್ಯದ್ ಆಲಂ ಅವರು ಹೊಂಡವನ್ನು ತಪ್ಪಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.





