ಉಚ್ಚಿಲ | ವಿದ್ಯಾರ್ಥಿ, ಶಿಕ್ಷಕ, ಪೋಷಕರ ಸ್ನೇಹ ಸಂಗಮ

ಉಳ್ಳಾಲ : ಲಾಸ್ಟ್ ಬೆಂಚಿನ ಮಕ್ಕಳು ರ‍್ಯಾಂಕ್ ವಿದ್ಯಾರ್ಥಿಗಳಿಗಿಂತಲೂ ಉತ್ತಮವಾಗಿ ಜೀವನ ನಿರ್ವಹಿಸುತ್ತಿದ್ದಾರೆಂದರೆ ನಾವು ಮಕ್ಕಳಿಗೆ ಜೀವನ ಕೌಶಲ್ಯವನ್ನು ಕಲಿಸುವ ಅನಿವಾರ್ಯತೆ ಖಂಡಿತಾ ಇದೆ. ಪ್ರತೀ ಬಾರಿಯೂ ನಾವೇ ಗೆಲ್ಲಲು ಸಾಧ್ಯವಿಲ್ಲ. ಮಕ್ಕಳು ಸೋಲನ್ನು ಸ್ವೀಕರಿಸಿದರೆ ಮಾತ್ರ ಭವಿಷ್ಯದಲ್ಲಿ ಗೆಲ್ಲಲು ಸಾಧ್ಯ ಎಂದು ಪಿಲಾರ್ ಕ್ಲಸ್ಟರ್ ಸಿಆರ್ ಪಿ ಗೀತಾ ಶೆಟ್ಟಿ ಅಭಿಪ್ರಾಯಪಟ್ಟರು.
ಉಚ್ಚಿಲ ಗುಡ್ಡೆಯ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ವಿದ್ಯಾರ್ಥಿ, ಶಿಕ್ಷಕ, ಪೋಷಕರ ಸ್ನೇಹ ಸಂಗಮ ಹಾಗೂ ಶೈಕ್ಷಣಿಕ ಸಾಂಸ್ಕೃತಿಕ ಕ್ರೀಡಾಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2025 ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಕಾರ್ಯಕ್ರಮ ಉದ್ಘಾಟಿಸಿದರು. ಸೋಮೇಶ್ವರ ಪುರಸಭಾ ಸದಸ್ಯರಾದ ಅಬ್ದುಲ್ ಸಲಾಮ್ ಉಚ್ಚಿಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಮೈಸೂರು ವಿಭಾಗದ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ತಂಡದ ವಿದ್ಯಾರ್ಥಿಗಳಾದ ಇಬ್ರಾಹಿಂ ಖಲೀಲ್, ಮುಹಮ್ಮದ್ ಫೈಝಲ್, ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳ ತಂಡ, ತಾಲೂಕು ಮಟ್ಟದ ಕರಾಟೆ ಸ್ಫರ್ದೆಯ ವಿಜೇತರು, ಪ್ರತಿಭಾಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ರಹೀಮ್ ಉಚ್ಚಿಲ, ಪತ್ರಕರ್ತರಾದ ಬಶೀರ್ ಕಲ್ಕಟ್ಟ, ದಿನೇಶ್ ನಾಯಕ್, ಉದ್ಯಮಿ ಸಲಾಮ್ ಜಿ.ಐ, ಸೋಮೇಶ್ವರ ಪುರಸಭೆಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಸಾಮಾಜಿಕ ಕಾರ್ಯಕರ್ತ ಸಲಾಮ್ ಉಚ್ಚಿಲ, ರಹ್ಮಾನಿಯಾ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಮುಹಮ್ಮದ್ ಅಲಿ ಜಿ.ಐ, ಪ್ರಗತಿಪರ ಕೃಷಿಕರಾದ ನಾರಾಯಣ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಸೀನ, ಉಪಾಧ್ಯಕ್ಷರಾದ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಸ್ವಾಗತಿಸಿ, ಶಿಕ್ಷಕರಾದ ಮೋಹನ್ ಶಿರ್ಲಾಲ್ ನಿರೂಪಿಸಿದರು. ಶಿಕ್ಷಕ ಚಂದ್ರ ಶೇಖರ್ ವಂದಿಸಿದರು.







