ಉಡುಪಿ: ಜಿಲ್ಲೆಯಲ್ಲಿ ಮಳೆಗೆ ಆಗಾಗ ಬಿಡುವು; ಹಾನಿ ಮುಂದುವರಿಕೆ

ಉಡುಪಿ/ಕುಂದಾಪುರ: ಬುಧವಾರ ಜಿಲ್ಲೆಯಲ್ಲಿ ಮಳೆ ಆಗಾಗ ಬಿಡುವು ನೀಡುತಿದ್ದರೂ, ಮನೆ ಹಾಗೂ ಇತರ ಹಾನಿಗಳು ಮುಂದುವರಿದಿದೆ. ಜಿಲ್ಲೆಯ ವಿವಿದೆಡೆಗಳಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಅಲ್ಪದಿಂದ ಭಾರೀ ಪ್ರಮಾಣದ ಹಾನಿಯೊಂದಿಗೆ ಕೃಷಿ ಹಾನಿ ಹಾಗೂ ಜಾನುವಾರು ಕೊಟ್ಟಿಗೆ ಹಾನಿಯ ಅನೇಕ ಪ್ರಕರಣಗಳು ವರದಿಯಾಗಿದ್ದು, ಎರಡು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಅಜ್ರಿಯ ಗೋವಿಂದ ಪೂಜಾರಿ ಹಾಗೂ ಕೊರ್ಗಿಯ ಗೌರೀಶ್ ಎಂಬವರ ಅಡಿಕೆ ತೋಟಕ್ಕೆ ಗಾಳಿಯಿಂದ ಭಾರೀ ಪ್ರಮಾಣದ ಹಾನಿಯಾಗಿದೆ. ಶಂಕರನಾರಾಯಣದ ನೇತ್ರಾವತಿ ಹಾಗೂ ಉಪ್ಪಿನಕುದ್ರಿನ ಗುಲಾಬಿ ಅವರ ಮನೆಯ ಜಾನುವಾರು ಕೊಟ್ಟಿಗೆಗಳಿಗೆ ಭಾಗಶ: ಹಾನಿಯಾಗಿದೆ.
ದಿನದಲ್ಲಿ ಹೆಚ್ಚಿನ ಹಾನಿ ಕುಂದಾಪುರ ತಾಲೂಕಿನಿಂದಲೇ ವರದಿಯಾಗಿದೆ. ಕಾರ್ಕಳ, ಕಾಪು, ಬ್ರಹ್ಮಾವರ ತಾಲೂಕುಗಳಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಬೀಸಿದ ಭಾರೀ ಗಾಳಿಗೆ ಹಟ್ಟಿಯಂಗಡಿಯ ಪ್ರಭಾವತಿ ಎಂಬವರ ಮನೆಯ ಮೇಲ್ಚಾವಣಿ ಹಾರಿಹೋಗಿದೆ. ಅದೇ ರೀತಿ ಬಲವಾದ ಗಾಳಿಯಿಂದ 7ಕ್ಕೂ ಅಧಿಕ ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ಬಸ್ರೂರಿನ ಗಿರಿಜ, ಶಂಕರನಾರಾಯಣದ ನರಸಿಂಹ ಮೊಗವೀರ, ದುರ್ಗಿ, ಮೊಳಹಳ್ಳಿ ಮುಣ್ಕ, ಗುಲ್ವಾಡಿಯ ಶಕುಂತಲಾ ಇವರ ಮನೆಗೆ ಮೇಲೆ ಮರ ಉರುಳಿ ಬಿದ್ದು 25ರಿಂದ 25 ಸಾವಿರ ರೂ.ಗಳವರೆಗೆ ನಷ್ಟ ಸಂಭವಿಸಿದೆ.
ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಇಂದೂ ಮಳೆ ಮುಂದುವರೆದಿದ್ದು ಕೆಲ ಕಾಲ ಮಳೆ ಪ್ರಮಾಣ ತಗ್ಗಿ ಬಿಸಿಲಿನ ವಾತಾವರಣ ಕಂಡುಬಂದರೂ ಕೆಲವೇ ಕ್ಷಣದಲ್ಲಿ ಧಾರಾಕಾರ ಮಳೆ ಸುರಿಯುವ ವಾತಾವರಣ ವೈಪರೀತ್ಯ ಬಹುತೇಕ ಕಡೆಗಳಲ್ಲಿ ಬುಧವಾರ ಕಂಡುಬಂದಿತ್ತು. ಸಂಜೆಯ ಬಳಿಕ ಮಳೆ ಪ್ರಮಾಣ ಜಾಸ್ತಿಯಾಗಿದೆ.
ವಂಡ್ಸೆ ಹೋಬಳಿ ಆಲೂರು ಗ್ರಾಮದಲ್ಲಿ ಮೂಕಾಂಬು ಎನ್ನುವರ ಕೊಟ್ಟಿಗೆ ಹಾನಿಯಾಗಿ 30 ಸಾವಿರ ನಷ್ಟ ಸಂಭವಿಸಿದೆ. ಮೇ 27ರಂದು ಸುರಿದ ಗಾಳಿ ಮಳೆಗೆ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆ ಎಂಬಲ್ಲಿನ ವಸಂತ ಅವರ ಮನೆಯ ಸಿಮೆಂಟ್ ಶೀಟ್ ಮತ್ತು ಮರದ ಪರಿಕರಗಳು ಹಾನಿಯಾಗಿ 10 ಸಾವಿರ ನಷ್ಟವಾಗಿದೆ. ಹಾಲಾಡಿ 76 ಗ್ರಾಮದ ಮುದೂರಿಯ ದೇವಮ್ಮ ಅವರ ಮನೆಯ ಕಾಂಪೌಂಡ್ ಗೋಡೆ ಕುಸಿತವಾಗಿ ಅಂದಾಜು 10 ಸಾವಿರ ನಷ್ಟವಾಗಿದೆ.
ಉಪ್ಪಿನಕುದ್ರು ಗ್ರಾಮದ ಗುಲಾಬಿಯವರಿಗೆ ಸಂಬಂಧಿಸಿದ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು 10 ಸಾವಿರ ಹಾನಿಯಾಗಿದೆ. ಇನ್ನು ಬೀಜಾಡಿ ಗ್ರಾಮದಲ್ಲಿ ಮಾಮೂಲಿ ನೀರು ಹೋಗುವ ದಾರಿ ತಡೆದ ಬಗ್ಗೆ ಕುಂದಾಪುರ ತಹಶೀಲ್ದಾರ್ ಸ್ಥಳ ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ 77.5ಮಿ.ಮೀ. ಸರಾಸರಿ ಮಳೆ
ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಸಂಬಂಧಿಸಿದಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 77.5ಮಿ.ಮೀ. ಮಳೆಯಾದ ವರದಿ ಬಂದಿದೆ.
ಹೆಬ್ರಿಯಲ್ಲಿ 109.7ಮಿ.ಮೀ., ಕುಂದಾಪುರದಲ್ಲಿ 91.7ಮಿ.ಮೀ., ಬ್ರಹ್ಮಾವರದಲ್ಲಿ 79.6, ಬೈಂದೂರಿನಲ್ಲಿ 70.6, ಕಾರ್ಕಳದಲ್ಲಿ 66.0, ಕಾಪುವಿನಲ್ಲಿ 49.0, ಉಡುಪಿಯಲ್ಲಿ 47.6ಮಿ.ಮೀ. ಮಳೆಯಾಗಿದೆ.







