ಉಜಿರೆಯಲ್ಲಿ ಮೃತದೇಹ ಹೂತುಹಾಕಿದ ಪ್ರಕರಣ: ತನಿಖೆ ನಡೆಸುವಂತೆ ಎಸ್.ಐ.ಟಿಗೆ ದೂರು ನೀಡಿದ ಭಾಸ್ಕರ ಬಡಕೊಟ್ಟು

ಬೆಳ್ತಂಗಡಿ: ಉಜಿರೆಯಲ್ಲಿ ಕೆಲವು ವ್ಯಕ್ತಿಗಳು ಸೇರಿಕೊಂಡು ಮೃತದೇಹವೊಂದನ್ನು ಹೂತು ಹಾಕಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದರೂ ಸಮರ್ಪಕವಾಗಿ ತನಿಖೆ ನಡೆದಿಲ್ಲ, ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಭಾಸ್ಕರ ಬಡಕೊಟ್ಟು ಎಂಬವರು ಎಸ್.ಐ.ಟಿ ಕಚೇರಿಗೆ ದೂರು ನೀಡಿದ್ದಾರೆ.
ಎಸ್.ಐ.ಟಿ ಅಧಿಕಾರಿಗಳು ದೂರು ಸ್ವೀಕರಿಸಿದ್ದು, ದೂರಿನ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು ಯಾವುದೇ ಅಪರಾಥ ಕೃತ್ಯದ ಕುರಿತು ಮಾಹಿತಿ ದೂರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮುದಿನಕ್ರಮ ಜರುಗಿಸುವ ಕುರಿತು ಸಲ್ಲಿಸುವಂತೆ ಹಿಂಬರಹ ನೀಡಿದ್ದಾರೆ.
ದೂರಿನಲ್ಲಿ ಏನಿದೆ:-
ಉಜಿರೆ ಗ್ರಾಮದ ನಿವಾಸಿಯಾಗಿರುವ ಸೋಂಪ ಯಾನೆ ಬಾಲಕೃಷ್ಣ ಶೆಟ್ಟಿ ಎಂಬವರು ಕಾಣೆಯಾಗಿದ್ದು ಈ ಬಗ್ಗೆ 18/12/2018 ರಂದು ದೂರನ್ನು ನೀಡಲಾಗಿತ್ತು. ಇದೆ ಸಂದರ್ಭದಲ್ಲಿ ಉಜಿರೆ ಬಿಲ್ಲರೋಡಿ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಮರ ಕಡಿಯುವ ವೇಳೆ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದ್ದು ಆ ಮೃತದೇಹವನ್ನು ಕೆಲವರು ಸೇರಿ ಮುಚ್ಚಿ ಹಾಕಿದ್ದಾರೆ ಎಂಬ ವದಂತಿಯು ಹರಿದಾಡುತ್ತಿದೆ. ಈ ಬಗ್ಗೆ ನಾಪತ್ತೆಯಾದ ವ್ಯಕ್ತಿಯ ಮನೆಯವರಲ್ಲಿ ದೂರು ನೀಡಲು ಹೇಳಿದರೂ ಅವರು ದೂರು ನೀಡಿಲ್ಲ. ಇದಾದ ಬಳಿಕ ತಾನು ಬೆಳ್ತಂಗಡಿ ಪೊಲೀಸರಿಗೆ 8/12/2018ರಂದು ದೂರು ನೀಡಿದ್ದೆ, ಸಂಶಯವಿರುವ ವ್ಯಕ್ತಿಗಳ ಹೆಸರುಗಳನ್ನು ನೀಡಿದ್ದೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಒತ್ತಡಕ್ಕೆ ಮಣಿದು ಸಮರ್ಪಕವಾಗಿ ತನಿಖೆಯನ್ನು ನಡೆಸಿಲ್ಲ. ನಾಪತ್ತೆಯಾದ ವ್ಯಕ್ತಿ ಅಂದಿನಿಂದ ಇಂದಿನ ವರೆಗೂ ಹಿಂತಿರುಗಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಸೋಂಪ ಯಾನೆ ಬಾಲಕೃಷ್ಣ ಶೆಟ್ಟಿಯ ಮೃತದೇಹವನ್ನು ಕಾನೂನು ಬಾಹಿರವಾಗಿ ಸರಕಾರಿ ಜಾಗದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗು ಇತರರು ಹೂತು ಹಾಕಿರುವುದಾಗಿ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ದೂರು ಸ್ವೀಕರಿಸಿದ್ದಾರೆ.







