ಉಕ್ಕುಡ | ಅಲ್ ಮುರಾಫಖಃ 2K26: ದರ್ಸ್ ವಿದ್ಯಾರ್ಥಿಗಳ ಸಾಹಿತ್ಯ ಸಂಗಮ ಸಮಾರೋಪ

ವಿಟ್ಲ: ಬದ್ರಿಯಾ ಜುಮಾ ಮಸೀದಿ, ಉಕ್ಕುಡ ಇದರ ಆಶ್ರಯದಲ್ಲಿ ನಡೆಯುತ್ತಿರುವ ಮುಹ್ಯಿಸ್ಸುನ್ನ ದರ್ಸ್‌ನ ಮುತಅಲ್ಲಿಮರ ಕಲಾ–ಸಾಹಿತ್ಯ ಕಲರವ ಅಲ್ ಮುರಾಫಖಃ 2K26 ಹಾಗೂ ಸದರಿ ಮಸೀದಿಯ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್-ಹಿಕಮಿ ಅಲ್-ಅರ್ಷದಿ ಮಳಲಿ ಉಸ್ತಾದರ ದರ್ಸ್‌ನ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಮೂರು ದಿನಗಳ ಸಾಹಿತ್ಯ–ಸಾಂಸ್ಕೃತಿಕ ಹಬ್ಬವು ನಿರೀಕ್ಷೆಗೂ ಮೀರಿದ ಅಪೂರ್ವ ಯಶಸ್ಸು ಕಂಡಿತು.
ಜುಮಾ ನಮಾಝಿನ ಬಳಿಕ ಆರಂಭಗೊಂಡ ಈ ಸಾಹಿತ್ಯ ಹಬ್ಬದಲ್ಲಿ ಮುತಅಲ್ಲಿಮರ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ಭಾಷಣ, ಹಾಡು, ಮೌಲಿದ್, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳು ಹಾಗೂ ಅಧ್ಯಯನಾತ್ಮಕ ಕಾರ್ಯಕ್ರಮಗಳು ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಬದ್ರಿಯಾ ಜುಮಾ ಮಸೀದಿ ಉಕ್ಕುಡ ಇದರ ಅಧ್ಯಕ್ಷ ಬದ್ರುಲ್ ಮುನೀರ್ ದರ್ಬೆ, ಕಾರ್ಯದರ್ಶಿ ಅಶ್ರಫ್ ಅಲಿ ನೆಕ್ಕರೆಕಾಡು, ಕೋಶಾಧಿಕಾರಿ ಮುಹಮ್ಮದ್ ಟಾಪ್ಕೋ ಸೇರಿದಂತೆ ಅನೇಕ ಉಲಮಾ, ಉಮರಾ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮದ ಎರಡನೇ ದಿನ ಜನಪ್ರಿಯ ವೈದ್ಯರಾದ ಡಾ. ಪ್ರಶಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಭಾಗವಹಿಸಿ, ಅವರನ್ನು ಭವ್ಯವಾಗಿ ಸನ್ಮಾನಿಸಲಾಯಿತು. ಜಾಮೀಯಾ ಹಿಕಮಿಯ್ಯಾ ಮುದರ್ರಿಸ್ ಅಲ್-ಉಸ್ತಾದ್ ಮುಹಮ್ಮದ್ ಸಖಾಫಿ ಇಲ್ಲಿಪಿಲಾಕ್ಕಲ್ ಅವರು ಆಶೀರ್ವಚನ ನೀಡಿದರು. ವಿಟ್ಲದ ಪುಷ್ಪಕ್ ಕ್ಲಿನಿಕ್ ಮಾಲಕರಾದ ಜನಪ್ರಿಯ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಮೂರು ದಿನಗಳ ಅವಧಿಯಲ್ಲಿ ನಡೆದ ಸ್ಪರ್ಧೆಗಳು ಉನ್ನತ ಮಟ್ಟದ ವೈವಿಧ್ಯತೆ ಮತ್ತು ಶಿಸ್ತಿನಿಂದ ಗಮನಸೆಳೆದವು. ಮುತಅಲ್ಲಿಮರ ಕೈಚಳಕದಿಂದ ಅಲಂಕೃತವಾದ ವರ್ಣರಂಜಿತ ವೇದಿಕೆ, ಆಕರ್ಷಕ ತೋರಣಗಳು, ಖುರ್‌ಆನ್ ಎಕ್ಸ್‌ಪೋ, ಸಾಹಿತ್ಯದ ಅಗತ್ಯತೆಯನ್ನು ಸಾರುವ ಫಲಕಗಳು ಹಾಗೂ ಇತಿಹಾಸ ಸ್ಮಾರಕಗಳ ಚಿತ್ರಣಗಳು ಕಾರ್ಯಕ್ರಮದ ಸ್ಥಳಕ್ಕೆ ವಿಶೇಷ ಕಂಗೊಳನ್ನು ನೀಡಿದವು. ಉಕ್ಕುಡದ ಪ್ರವೇಶ ದ್ವಾರದಿಂದ ಪ್ರಧಾನ ವೇದಿಕೆಯವರೆಗೆ ನಿರ್ಮಿಸಲಾದ ಕಲಾತ್ಮಕ ರಚನೆಗಳು ಅತಿಥಿಗಳ ಮನ ಸೆಳೆದವು.
ಶಿಸ್ತು, ಅತಿಥಿ ಸ್ವಾಗತ, ಕಾರ್ಯಕ್ರಮ ನಿರ್ವಹಣೆ, ಸ್ಪರ್ಧಾ ಆಯೋಜನೆ ಹಾಗೂ ಅಂತಿಮ ಸ್ವಚ್ಛತೆವರೆಗೆ ಪ್ರತಿಯೊಂದು ಹಂತದಲ್ಲೂ ಆಯೋಜಕರ ಕಾರ್ಯಶೈಲಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಅಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್, ಹಿಕಮಿಯ್ಯ ಪ್ರಧಾನ ಮುದರ್ರಿಸ್ ಶೈಖುನಾ ಮುಹಮ್ಮದ್ ಸಖಾಫಿ ಮಲಪ್ಪುರಂ, ಸಯ್ಯಿದ್ ಮುಕ್ತಾರ್ ತಂಙಳ್ ಕುಂಬೋಳ್ (ದುಆ ನೆರವೇರಿಸಿದರು), ಮಸ್ದರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಸಯ್ಯಿದ್ ನವಾಝ್ ಹುಸೈನ್ ತಂಙಳ್, ಸಯ್ಯಿದ್ ಶರಫುದ್ದೀನ್ ತಂಙಳ್, ಸಯ್ಯಿದ್ ಮದಕ ತಂಙಳ್, ಕನ್ಯಾನ ಉಸ್ತಾದ್, ದ್ಸಿಕ್ರಾ ಸಂಸ್ಥೆಯ ಶಿಲ್ಪಿ ನೌಫಲ್ ಸಖಾಫಿ ಕಳಸ, ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಉಸ್ತಾದ್, ಉಪ್ಪಳ್ಳಿ ಮುದರ್ರಿಸ್ ಮಾಚಾರ್ ಉಸ್ತಾದ್, ತೈಬಾ ಗಾರ್ಡನ್ ಕಾರ್ಕಳ ಸಂಸ್ಥೆಯ ಪ್ರಿನ್ಸಿಪಾಲ್ ಶರೀಫ್ ಸಅದಿ ಕಿಲ್ಲೂರು, ಮುಹಮ್ಮದಲಿ ಸಖಾಫಿ ಅಶ್‌ಅರಿಯ್ಯ, ಮರ್ಕಝ್ ಕೈಕಂಬ ಸ್ಥಾಪಕ ಬದ್ರುದ್ದೀನ್ ಅಝ್ಹರಿ, ಮಜ್ಲಿಸ್ ಗಾಣೆಮಾರ್ ಸ್ಥಾಪಕ ಮಜೀದ್ ಹಾಫಿಳ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಮುಈನುಸ್ಸುನ್ನ ಹಾವೇರಿ ಸ್ಥಾಪಕ ಮುಸ್ತಫಾ ನಈಮಿ ಮೋಂಟುಗೋಳಿ, ಸುನ್ನಿ ಪೈಝಿ, ಕುಪ್ಪೆಟ್ಟಿ ಮುದರ್ರಿಸ್ ಇರ್ಶಾದ್ ಸಖಾಫಿ ಬೊಳ್ಳಾಯಿ, ಸಮಸ್ತ ಖಾರಿ ಹಾಫಿಳ್ ಜಿ.ಎಂ. ಹನೀಫಿ ಉಸ್ತಾದ್ ಪಾಣೆಮಂಗಳೂರು, ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ, ಎಂ.ಎಸ್. ಮುಹಮ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶಾಕಿರ್ ಅಳಕೆಮಜಲು ಅವರು ವೇದಿಕೆಯಲ್ಲಿ ಶುಭಹಾರೈಸಿದರು.
ಒಟ್ಟಾರೆಯಾಗಿ ಅಲ್ ಮುರಾಫಖಃ 2K26 ಕಾರ್ಯಕ್ರಮವು ಧಾರ್ಮಿಕ ಜಾಗೃತಿ, ಸಾಹಿತ್ಯಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯೊಂದಿಗೆ ಉಕ್ಕುಡ ನಾಡಿನಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಕಾರ್ಯಕ್ರಮದ ನೇತೃತ್ವ ವಹಿಸಿದ ಮಳಲಿ ಉಸ್ತಾದರು, ಬೆನ್ನೆಲುಬಾಗಿ ನಿಂತ ಪೂರ್ವ ವಿದ್ಯಾರ್ಥಿಗಳು, ಪರಿಶ್ರಮಿಸಿದ ಮುತಅಲ್ಲಿಮರು, ದೃಢ ಬೆಂಬಲ ನೀಡಿದ ಉಕ್ಕುಡದ ಜನತೆ ಹಾಗೂ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಲಾಯಿತು.







