ಉಳ್ಳಾಲ: ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿದ ವ್ಯಾಪಾರಸ್ಥರು

ಬಂದ್ ಆಗಿರುವ ತೊಕ್ಕೊಟ್ಟು ಪೇಟೆಯ ಅಂಗಡಿಗಳು
ಉಳ್ಳಾಲ: ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಕೊಲ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ ಖಂಡಿಸಿ ಇಂದು ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ನಡೆಸಿದ್ದಾರೆ.
ತಾಲೂಕು ವ್ಯಾಪ್ತಿಯ ಕಿನ್ಯ, ದೇರಳಕಟ್ಟೆ, ಕೆಸಿರೋಡ್, ಉಳ್ಳಾಲ, ತೊಕ್ಕೊಟ್ಟು, ಕೊಣಾಜೆ,ಮುಡಿಪು,ನಾಟೆಕಲ್ ಸಹಿತ ಬಹುತೇಕ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ನಡೆಸಿದ್ದಾರೆ. ಜನ ಸಂಚಾರ ವಿರಳವಾಗಿತ್ತು.ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವು. ರಿಕ್ಷಾ ಸಂಚಾರ ವಿರಳವಾಗಿತ್ತು.
ದೇರಳಕಟ್ಟೆ, ನಾಟೆಕಲ್, ಮಂಜನಾಡಿಗಳಲ್ಲಿ ರಿಕ್ಷಾ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಬ್ಯಾಂಕ್ ಗಳು ಎಂದಿನಂತೆ ಕಾರ್ಯಾಚರಿಸಿದರೂ ಗ್ರಾಹಕರ ಕೊರತೆ ಇತ್ತು. ಬಸ್ ಸಂಚಾರ ವಿರಳವಾಗಿತ್ತು. ಕೊಣಾಜೆ, ತಲಪಾಡಿ, ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಸಂಚರಿಸುತಿತ್ತು. ಮುಡಿಪು,ಬಿ.ಸಿ.ರೋಡ್ ಕಡೆ ಬಸ್ ಸಂಚಾರ ಮಧ್ಯಾಹ್ನದವರೆಗೆ ಮಾತ್ರ ಇತ್ತು. ಮಧ್ಯಾಹ್ನ ಬಳಿಕ ಪ್ರಯಾಣಿಕರು ಇಲ್ಲದ ಕಾರಣ ಬಸ್ ಸಂಚಾರ ಸ್ಥಗಿತಗೊಂಡವು. ಕೆಎಸ್ಸಾರ್ಟಿಸಿ ಬಸ್ ಮಧ್ಯಾಹ್ನ ದವರೆಗೆ ಮಾತ್ರ ಇತ್ತು.ದೇರಳಕಟ್ಟೆ,ನಾಟೆಕಲ್, ತೊಕ್ಕೊಟ್ಟು ಪರಿಸರದಲ್ಲಿ ತರಕಾರಿ,ಮೀನು, ಮಾಂಸದ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಔಷಧಿ ಅಂಗಡಿ ಎಂದಿನಂತೆ ತೆರೆದಿತ್ತು. ಯಾವುದೇ ಅಹಿತಕರ ಘಟನೆ ನಡೆದ ವರದಿ ಆಗಿಲ್ಲ. ತೊಕ್ಕೊಟ್ಟು, ದೇರಳಕಟ್ಟೆ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.







