ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ

ಉಳ್ಳಾಲ: ಗಣರಾಜ್ಯೋತ್ಸವದ ಮಹತ್ವ, ತತ್ವ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಅವರು ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ ನಡೆದ ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಿಸಿಲಿನಲ್ಲೂ ನಿಂತು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಿಸುವುದು ಅವರ ವ್ಯಕ್ತಿತ್ವ ಮತ್ತು ಶಿಸ್ತಿನ ಬೆಳವಣಿಗೆಗೆ ಸಹಾಯಕವಾಗುತ್ತದೆ. 35 ವರ್ಷಗಳ ಹಿಂದೆ ನಾನು ನೆಹರು ಮೈದಾನದಲ್ಲಿ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದೆ. ಇಂದು ನೀವೆಲ್ಲ ನನಗೆ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯ. ಇದೇ ರೀತಿ ಇಂದಿನ ವಿದ್ಯಾರ್ಥಿಗಳೂ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸಲು ಧೈರ್ಯ ನೀಡಿರುವುದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ. ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಗೆ 186 ಕೋಟಿ ರೂ. ಹಾಗೂ ಕುಡಿಯುವ ನೀರಿನ ಯೋಜನೆಗೆ 256 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ, ಜೊತೆಗೆ ಅಬ್ಬಕ್ಕ ಸರ್ಕಲ್‌ನಲ್ಲಿರುವ ರಾಣಿ ಅಬ್ಬಕ್ಕ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಹಳೆಕೋಟೆ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ನಿರೀಕ್ಷಕ ಪ್ರಮೋದ್, ಉಪ ತಹಶೀಲ್ದಾರ್ ವಿಜಯ ವಿಕ್ರಮ್, ಪೌರಾಯುಕ್ತ ಸಂತೋಷ್, ಗ್ರಾಮಕರಣಿಕ ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಮುಸ್ತಫಾ ಅಬ್ದುಲ್ಲಾ, ಗ್ರಾಮಕರಣಿಕ ಲಿಂಗಪ್ಪ, ನಗರಸಭೆ ಕಂದಾಯ ಅಧಿಕಾರಿ ನವೀನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮನ್ಸೂರ್ ಮಂಚಿಲ, ಮುಸ್ತಫಾ ಮಲಾರ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ವಕ್ಫ್ ಸದಸ್ಯ ರಝಿಯಾ ಇಬ್ರಾಹೀಮ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಉಳ್ಳಾಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್, ಸೋಮೇಶ್ವರ ಪುರಸಭೆ ಸದಸ್ಯ ಪುರುಷೋತ್ತಮ ಶೆಟ್ಟಿ, ಸಲಾಮ್ ಉಚ್ಚಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತ್ಯಾಗಂ ಹರೇಕಳ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ಹಾಗೂ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.







