Konaje | ಉಳ್ಳಾಲ ಬಂಟರ ಸಂಘದ ವತಿಯಿಂದ ಪುಷ್ಪರಾಜ್ ಶೆಟ್ಟಿ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕೊಣಾಜೆ: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರನ್ನು ಉಳ್ಳಾಲ ವಲಯ ಬಂಟರ ಸಂಘದ ವತಿಯಿಂದ ಭಾನುವಾರ ಅಸೈಗೋಳಿಯ ಬಂಟರ ಸಂಘದ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್ ಅವರು, ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಬಂಟರ ಸಂಘದ ವತಿಯಿಂದ ನಡೆಯುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಪತ್ರಕರ್ತರ ಸಂಘವು ಕೂಡಾ ಸದಾ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಾ ಬಂದಿದೆ. ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಪುಷ್ಪರಾಜ್ ಶೆಟ್ಟಿ ಅವರ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಕ್ಷೇಮಾಭಿವೃದ್ಧಿಯೊಂದಿಗೆ ಜನಪರ ಕಾಳಜಿಯ ಅನೇಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಬಂಟರ ಸಂಘದ ವತಿಯಿಂದ ನಡೆದ ಸನ್ಮಾನವು ಜವಬ್ಧಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ,ಕೋಶಾಧಿಕಾರಿ ಯಶವಂತ ಶೆಟ್ಟಿ ಪಿಲಾರ್ ಉಪಾಧ್ಯಕ್ಷೆ ಮಲ್ಲಿಕಾ ಭಂಡಾರಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಯಾದ ಆನಂದ ಶೆಟ್ಟಿ ಸ್ವಾಗತಿಸಿದರು. ವಿವೇಕ್ ರೈ ವಂದಿಸಿದರು.







