ಉಳ್ಳಾಲ | ಅವ್ಯವಸ್ಥಿತ ಪೈಪ್ ಲೈನ್ ಕಾಮಗಾರಿ : ಸಹಾಯಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು

ಉಳ್ಳಾಲ: ಕುಡಿಯುವ ನೀರಿನ ಕಾಮಗಾರಿ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿ ಅಮೃತ್ 2.0 ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಾಂತ್ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸೋಮೇಶ್ವರ ಪುರಸಭೆಯ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಪುರುಷೋತ್ತಮ ಶೆಟ್ಟಿ ಪಿಲಾರ್ ಅವರು ಒಂದು ವಾರ್ಡ್ ನ ಕೆಲಸ ಪೂರ್ತಿ ಆದ ಬಳಿಕ ಇನ್ನೊಂದು ವಾರ್ಡ್ ನ ಕೆಲಸ ಮಾಡಲು ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದ್ದಾರೆ. ಆದರೆ ನೀವು ಪ್ರತಿ ವಾರ್ಡ್ ನಲ್ಲಿ ಅರ್ಧಂಬರ್ಧ ಕೆಲಸ ಮಾಡಿ ಬಿಟ್ಟಿದ್ದೀರಿ. ಇದನ್ನು ಪೂರ್ತಿ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಕೌನ್ಸಿಲರ್ ಮೋಹನ್ ಶೆಟ್ಟಿ ಮಾತನಾಡಿ, ಕುಂಪಲ ಮುಖ್ಯ ರಸ್ತೆ ಕಾಂಕ್ರೀಟ್ ಅಗೆದು ಹಾಕಿದ್ದೀರಿ. ಪೈಪ್ ಲೈನ್ ಕಾಮಗಾರಿ ಮಾಡಿ ರಸ್ತೆ ಮುಚ್ಚಲಿಲ್ಲ. ಇದರಿಂದ ಅಪಘಾತ ಕೂಡ ಸಂಭವಿಸಿದೆ. ಶೀಘ್ರವೇ ಅಗೆದು ಹಾಕಿದ ರಸ್ತೆಗೆ ಮರು ಕಾಂಕ್ರಿಟೀಕರಣ ಮಾಡಿ ಹೊಂಡ ಮುಚ್ಚಬೇಕು ಎಂದು ಒತ್ತಾಯಿಸಿದರು.
ಕೌನ್ಸಿಲರ್ ಮನೋಜ್ ಮಾತನಾಡಿ ,ಪೈಪ್ ಲೈನ್ ಗಾಗಿ ಹೊಂಡ ನಿರ್ಮಾಣ ಮಾಡಿ ಸಿಗುವುದಾದರೆ ಪೈಪ್ ಲೈನ್ ಮಾಡುವುದೇ ಬೇಡ. ಜನರು ಹೊಂಡ ನೋಡಿ ನಮಗೆ ಬಯ್ಯುತ್ತಾರೆ. ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಚಿತ್ರಾಂಜಲಿ ನಗರದಲ್ಲಿ ಕ್ರಮ ಬದ್ಧವಾಗಿ ಪೈಪ್ ಲೈನ್ ಕಾಮಗಾರಿ ಮಾಡಿಲ್ಲ. ಒಂದು ಪೈಪ್ ಲೈನ್ ಕಾಮಗಾರಿ ಮಾಡಲು ಆರು ಬಾರಿ ರಸ್ತೆ ಅಗೆದಿದ್ದೀರಿ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೃತ್ 2.0 ಕುಡಿಯುವ ನೀರು ಯೋಜನೆಯ ಸಹಾಯಕ ಅಭಿಯಂತರ ಶ್ರೀಕಾಂತ್ ಅವರು, ಪೈಪ್ ಲೈನ್ ಕಾಮಗಾರಿಯಲ್ಲಿ ಸ್ವಲ್ಪ ಎಡವಟ್ಟು ಆಗಿದೆ. ಈ ವಾರ ಅದನ್ನು ಸರಿಪಡಿಸುತ್ತೇನೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಅಬ್ಬಕ್ಕ ಸರ್ಕಲ್ ಗೆ ಹೋಗುವ ರಸ್ತೆಗೆ ' ರಾಣಿ ಅಬ್ಬಕ್ಕ ' ಹಾಗೂ ಬಟ್ಟಪ್ಪಾಡಿಗೆ ಹೋಗುವ ರಸ್ತೆಗೆ ಅಮೃತ್ ಸೋಮೇಶ್ವರ ಅವರ ಹೆಸರಿಡಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ಟ್ರೇಡ್ ಲೈಸನ್ಸ್ ಇಲ್ಲದ ಅಂಗಡಿಗಳನ್ನು ಪತ್ತೆ ಹಚ್ಚಲು, ದಾಖಲೆ ಪರಿಶೀಲಿಸಿ ಡೋರ್ ನಂಬರ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.