ಉಳ್ಳಾಲ ತಾಲೂಕು ಮಟ್ಟದ ದಫ್ ಸ್ಪರ್ಧೆ: ರೆಂಜಾಡಿ ತಾಜುಲ್ ಹುದಾ ದಪ್ಪು ತಂಡ ಪ್ರಥಮ

ಮಂಗಳೂರು, ಡಿ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿದ್ದ ಉಳ್ಳಾಲ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ರೆಂಜಾಡಿ ತಾಜುಲ್ ಹುದಾ ದಪ್ಪುತಂಡ ಪ್ರಥಮ ಸ್ಥಾನ ಗಳಿಸಿದೆ.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಇಮಾದುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ನಡೆದ ಸ್ಪರ್ಧೆಯಲ್ಲಿ ಶಂಸುಲ್ ಹುದಾ ದಪ್ಪು ತಂಡ ದ್ವಿತೀಯ ಸ್ಥಾನ ಪಡೆದಿದೆ.
ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ತಂಡಗಳು ಜಿಲ್ಲಾ ಮಟ್ಟದ ದಫ್ ಸ್ಪರ್ಧೆಗೆ ಆಯ್ಕೆಯಾಗಿವೆ. ಎ.ಐ. ಝಕರಿಯಾ ಮತ್ತು ಮುಹಮ್ಮದ್ ರಫೀಕ್ ಮದನಿ ತಾಲೂಕು ಮಟ್ಟದ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.
ಡಿ. 20 ರಂದು ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆವರಣದಲ್ಲಿ ಮಸೀದಿ ಆಡಳಿತ ಸಮಿತಿಯ ಸಹಯೋಗದೊಂದಿಗೆ ದ.ಕ. ಜಿಲ್ಲಾ ಮಟ್ಟದ ದಫ್ ಸರ್ಧೆ ಆಯೋಜಿಸಲಾಗಿದೆ.
ಉದ್ಘಾಟನೆ :
ಉಳ್ಳಾಲ ತಾಲೂಕು ಮಟ್ಟದ ದಫ್ ಸ್ಪರ್ಧೆಯನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಹೆಚ್. ಅವರು ಬ್ಯಾರಿ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಭಾಷೆಯೆಂದರೆ ಕೆಲವು ಶಬ್ಧಗಳಲ್ಲ ಅಥವಾ ಸಂವಹನ ಮಾಧ್ಯಮ ಮಾತ್ರವಲ್ಲ. ಪ್ರತೀ ಭಾಷೆಯೊಂದಿಗಿರುವ ಭವ್ಯ ಸಂಸ್ಖೃತಿ ಆ ಭಾಷೆ ಮಾತನಾಡುವವರ ಬದುಕನ್ನು ರೂಪಿಸುತ್ತದೆ ಎಂದು ಉಮರ್ ತಿಳಿಸಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಮೊಹಿದೀನ್ ಬಾವ,ಇಮಾದುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಮಜೀದ್ ಹಸನ್ ಮಾಡೂರು, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ರಶೀದ್ ಹಂಝ, ಮಾಜಿ ಅಧ್ಯಕ್ಷ ಅಬ್ದುಲ್ಲ ಕೊಂಡಾಣ, ಮಾಜಿ ಕೋಶಾಧಿಕಾರಿ ಅಬ್ಬಾಸ್ ಪಿ.ಎಚ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅನ್ಸಾರ್ ಕಾಟಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಕಾಡಮಿ ಸದಸ್ಯ ಹಾಗೂ ಸ್ಪರ್ಧೆಯ ಸಂಚಾಲಕ ಹಮೀದ್ ಹಸನ್ ಮಾಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







