ವಿಚಾರಣಾಧೀನ ಕೈದಿಯಿಂದ ಸಹ ಕೈದಿಗಳಿಗೆ ಹಲ್ಲೆ; ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪ

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.3: ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವ ಸಹ ಕೈದಿಗಳಿಗೆ ಹಲ್ಲೆ ನಡೆಸಿರುವ ಬಗ್ಗೆ ಮತ್ತು ಅಧಿಕಾರಿ, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಹಾಗೂ ಇತರ ಕೆಲವು ಕೈದಿಗಳು ಜೈಲಿನ ಅಧಿಕಾರಿ, ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನ.29ರಂದು ವಿಚಾರಣಾಧೀನ ಕೈದಿ ಮುಹಮ್ಮದ್ ಆಸಿಫ್ ಎಂಬಾತ ಕಾರಾಗೃಹದ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಏರುಧ್ವನಿಯಲ್ಲಿ ಕೂಗಾಡಿಕೊಂಡಿದ್ದಲ್ಲದೆ ‘ಎ’ ವಿಭಾಗದ ಎಲ್ಲಾ ಕೈದಿಗಳು ಹೊರಗೆ ಬರುವಂತೆ ಪ್ರೇರೇಪಿಸಿದ್ದ ಎಂದು ಆರೋಪಿಸಲಾಗಿದೆ. ಅದಕ್ಕೂ ಮೊದಲು ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮೂವರು ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಈ ಬಗ್ಗೆ ಅಧೀಕ್ಷಕರು ಮತ್ತು ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಎಂದು ಪ್ರಕರಣ ದಾಖಲಾಗಿದೆ.
ಡಿ.2ರಂದು ಮುಹಮ್ಮದ್ ಆಸಿಫ್, ಮೊಯ್ದಿನ್ ಫರಾಝ್, ಇಬ್ರಾಹೀಂ ಖಲೀಲ್, ನಿಸಾರ್ ಹುಸೈನ್ ಮತ್ತು ಮುಹಮ್ಮದ್ ಅಫೀಝ್ ಎಂಬ ಕೈದಿಗಳು ಕರ್ತವ್ಯ ನಿರತ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆಂದು ಪ್ರಕರಣ ದಾಖಲಾಗಿದೆ.





