ಯುನಿವೆಫ್ | ಯುವಕರು-ವಿದ್ಯಾರ್ಥಿಗಳ ಸ್ನೇಹ ಮಿಲನ

ಮಂಗಳೂರು , ನ.14: ಯುನಿವೆಫ್ ಕರ್ನಾಟಕ ಆಶ್ರಯದಲ್ಲಿ ವಿದ್ಯಾರ್ಥಿ ಹಾಗೂ ಯುವಕರ ಸ್ನೇಹ ಮಿಲನ ಕಾರ್ಯಕ್ರಮ ಫಳ್ನೀರ್ ನ ಲುಲು ಸೆಂಟರ್ ನಲ್ಲಿರುವ ಅಲ್ ವಹ್ದಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
2025 ಸೆ.19 ರಿಂದ ಜ.2ರ ವರೆಗೆ ‘ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ಅಭಿಯಾನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ಜನಾಬ್ ರಫೀಉದ್ದೀನ್ ಕುದ್ರೋಳಿ ಅವರು ದಿಕ್ಸೂಚಿ ಭಾಷಣ ಮಾಡಿದರು. ‘‘ಯುವಕರು ಸುಲಭವಾಗಿ ದಾರಿ ತಪ್ಪಿ ನಡೆಯುವ ಅವಕಾಶಗಳಿರುವ ಇಂದಿನ ಕಾಲದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಯುನಿವೆಫ್ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.
ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರು ವಿದ್ಯಾರ್ಥಿ ಹಾಗೂ ಯುವಕರೊಂದಿಗೆ ಸಂವಾದ ನಡೆಸಿ, ‘‘ಪ್ರಸಕ್ತ ಪರಿಸ್ಥಿತಿಯನ್ನು ಬದಲಾಯಿಸಬೇಕೆಂಬ ಬಯಕೆ ಯುವಕರಲ್ಲಿ ಮೂಡದಿದ್ದರೆ ಅದನ್ನು ಹೇಗೆ ಮಾಡಬೇಕೆಂಬ ಯೋಜನೆಯೂ ಮೂಡಿ ಬರುವುದಿಲ್ಲ. ವ್ಯವಸ್ಥಿತವಾಗಿ ಸುಳ್ಳು ಹರಡುವವರ ವಿರುದ್ಧ ಸತ್ಯ ಹರಡುವ ಕಾರ್ಯ ತ್ವರಿತವಾಗಿ ನಡೆಯಬೇಕಾಗಿದೆ. ಅದಕ್ಕಾಗಿ ಯುವಕರು ಸನ್ನದ್ಧರಾಗಬೇಕು’’ ಎಂದರು.
ಸಿರಾಜುಲ್ ಹಸನ್ ಕಿರಅತ್ ಪಠಿಸಿದರು. ಯುನಿವೆಫ್ ಕ್ಯಾಂಪಸ್ ಫೋರಮ್ ಸದಸ್ಯ ಮುಹಮ್ಮದ್ ಅಯಾನ್ ಆಸಿಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮುಹಮ್ಮದ್ ಸುಹೈಮ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುನಿವೆಫ್ ಕ್ಯಾಂಪಸ್ ಫೋರಮ್ ಅಧ್ಯಕ್ಷ ಇಹ್ಸಾನ್ ರಫೀಕ್ ವಂದಿಸಿದರು.







