ಕೋಟಿ ಸೂರಿದರೂ ಬಗೆಹರಿಯದ ಒಳಚರಂಡಿ ಅವ್ಯವಸ್ಥೆ: ಮನಪಾ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಮಂಗಳೂರು, ಆ. 29: ನಗರದೆಲ್ಲೆಡೆ ಒಳಚರಂಡಿ ವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಕೋಟಿಗಟ್ಟಲೆ ಹಣ ಸುರಿದರೂ ಸಮಸ್ಯೆ ಬಗೆಹರಿದಿಲ್ಲ ಎಂಬ ಸದಸ್ಯರ ಅಸಮಾಧಾನ, ಆಕ್ರೋಶಕ್ಕೆ ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಸದಸ್ಯರ ದೀರ್ಘಾವಧಿಯ ಚರ್ಚೆಯ ಜತೆಗೆ, ಸ್ಮಾರ್ಟ್ ಸಿಟಿ, ಅಮೃತ್ ಸೇರಿದಂತೆ ಹಲವು ಯೋಜನೆಗಳಡಿ ಒಳಚರಂಡಿ ಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗುತ್ತಿದ್ದರೂ ಹಲವು ವಾರ್ಡ್‌ಗಳಲ್ಲಿ ಇನ್ನೂ ಮನೆಗಳಿಗೆ ಒಳಚರಂಡಿ ಸಂಪರ್ಕವೇ ನೀಡಲಾಗಿಲ್ಲ ಎಂಬ ಆಕ್ರೋಶ ಸದಸ್ಯರಿಂದ ವ್ಯಕ್ತವಾಯಿತು.
ಬಂದರು ವಾರ್ಡ್‌ನ ಒಳಚರಂಡಿ ಸಮಸ್ಯೆ ಬಗ್ಗೆ ಕಳೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಲಾಗಿತ್ತಾದರೂ, ಅಧಿಕಾರಿಗಳು ಭೇಟಿ ನೀಡಿ ಹೋಗಿದ್ದಾರೆಯೇ ಹೊರತು ಕ್ರಮ ಆಗಿಲ್ಲ. ಒಳಚರಂಡಿ ವ್ಯವಸ್ಥೆಯ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ನವೀನ್ ಡಿಸೋಜಾ ಸಭೆಯ ಆರಂಭದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಎಡಿಬಿ ಪ್ರಥಮ ಹಂತದ ಯೋಜನೆಯ ಕಾಮಗಾರಿ ಮುಗಿದರೂ ಇನ್ನೂ ವೆಟ್‌ವೆಲ್‌ಗಳು ಕಾರ್ಯಾರಂಭಿಸಿಲ್ಲ ಎಂದು ಅಬ್ದುಲ್ ರವೂಫ್ ಆರೋಪಿಸಿದರೆ, ರವಿವಾರ ದಿನ ಒಳಚರಂಡಿ ಸಮಸ್ಯೆ ನಿರ್ವಹಣೆಗೆ ಸಿಬ್ಬಂದಿಯೇ ಇರುವುದಿಲ್ಲ ಎಂದು ಲ್ಯಾನ್ಸಿ ಲೋಟ್ ಹೇಳಿದರು.
ಮನಪಾ ವ್ಯಾಪ್ತಿಯ 800 ಕಿ.ಮೀ. ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯಡಿ 24 ವೆಟ್‌ವೆಲ್‌ಗಳು 4 ಎಸ್‌ಟಿಪಿಗಳಿವೆ. ಕೋಟಿಗಟ್ಟಲೆ ಹಣ ಖರ್ಚು ಮಾಡಾಗದಿಎ. ಆದರೆ ಒಳಚರಂಡಿ ನೀರು ತೆರೆದ ಚರಂಡಿಯಲ್ಲಿ ಹರಿದು ಸಮುದ್ರ, ನದಿ ಸೇರುತ್ತಿದೆ. ಬಾವಿಗಳು ಕಲುಷಿತಗೊಳ್ಳುತ್ತಿವೆ. ಒಳಚರಂಡಿ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸದ ಕಾರಣ ಕಲುಷಿತ ನೀರು ನಂದಿನಿ, ಫಲ್ಗುಣಿ ನದಿ ಒಡಲು ಸೇರುತ್ತಿದೆ. ಗುತ್ತಿಗೆದಾರರು ಈ ವಿಫಲತೆಗೆ ಅಧಿಕಾರಿಗಳು ಜವಾಬ್ಧಾರರು ಎಂದು ಸದಸ್ಯ ವಿನಯರಾಜ್ ಆರೋಪಿಸಿದರು.
ನಂತೂರಿನಿಂದ ನೇತ್ರಾವತಿ ರಾಜಕಾಲುವೆ ಟ್ರಂಕ್‌ಲೈನ್ 12 ಅಡಿ ಒಳಚರಂಡಿ ತ್ಯಾಜ್ಯದಿಂದ ತುಂಬಿದೆ. ನಮ್ಮ ಹಾಗೂ ಸುತ್ತಮುತ್ತಲಿನ ವಾರ್ಡ್‌ಗಳ ಮನೆಗಳವರಿಗೆ ಇನ್ನೂ ಒಳಚರಂಡಿಗೆ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ನಮ್ಮದು ಸಮುದ್ರ ಸಮೀಪದ ಪ್ರದೇಶ. ಮಳೆಗಾಲದಲ್ಲಿ ನಮ್ಮ ಅವ್ಯವಸ್ಥೆಯ ಬಗ್ಗೆ ಕೇಳುವವರು ಯಾರು? ಮೂರು ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದರೂ ಏನೂ ಆಗುತ್ತಿಲ್ಲ ಎಂದು ಪ್ರವೀಣ್ ಚಂದ್ರ ಆಳ್ವ ಆಕ್ರೋಶ ವ್ಯಕ್ತಪಡಿಸದರೆ, ಸದಸ್ಯೆ ವೀಣಾ ಮಂಗಳ ಅವರೂ ದನಿಗೂಡಿಸಿದರು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರೂ ಪ್ರತಿಕ್ರಿಯಿಸಿ,ಬಹುತೇಕ ಸದಸ್ಯರಿಂದ ಒಳಚರಂಡಿ ನಿರ್ವಹಣೆ ನಿಂತು ಹೋಗಿರುವ ಬಗ್ಗೆ ದೂರುಗಳು ಬಂದಿವೆ. ವಿವಿಧ ಮೂಲಗಳಿಂದ ಕೋಟಿಗಟ್ಟಲೆ ಹಣ ವ್ಯಯಿಸಲಾಗಿದೆ ಎಂದರು.
ಒಳಚರಂಡಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಕನ್ಸಲ್ಟೆನ್ಸಿಗಳ ಜತೆ ಚರ್ಚಿಸಿ ಸಮಗ್ರ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಪಾಲಿಕೆ ಆಯುಕ್ತ ಆನಂದ್ ಅವರು ತಿಳಿಸಿದರು.
ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಳೆದ ಸಭೆಯಲ್ಲಿ ಟೈಗರ್ ಕಾರ್ಯಾಚರಣೆ ಮುಂದುವರಿಸುವು ದಾಗಿ ತಿಳಿಸಲಾಗಿದ್ದರೂ ಕ್ರಮ ಯಾಕಾಗಾತುತ್ತಿಲ್ಲ ಎಂದು ದಿವಾಕರ ಪಾಂಡೇಶ್ವರ ಪ್ರಶ್ನಿಸಿದರು.
ನಗರ ವ್ಯಾಪ್ತಿಯ ಒಳ, ಸರ್ವಿಸ್ ಹಾಗೂ ಮುಖ್ಯ ರಸ್ತೆಗಳು ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ಹಬ್ಬಗಳು ಇರುವುದರಿಂದ ಎಲ್ಲಾ ರಸ್ತೆಗಳಿಗೆ ಪ್ಯಾಚ್‌ವರ್ಕ್ ಕಾಮಗಾರಿ ಮಾಡಿಸಬೇಕು ಎಂದು ಆಗ್ರಹಿಸಿದ ಶಶಿಧರ ಹೆಗ್ಡೆ, ಸಿಂಗಲ್ ಸೈಟ್‌ಗೆ ಸಂಬಂಧಿಸಿ ಮೂಡ ಅಧಿಕಾರಿಗಳು ಬಡವರನ್ನು ಸತಾಯಿಸುತ್ತಿದ್ದಾರೆ. ಮನಪಾ ಮತ್ತು ಮೂಡ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಅವರು ಆಕ್ಷೇಪಿಸಿದಾಗ, ಮನೋಜ್ ಕುಮಾರ್ ಹಾಗೂ ಇತರ ಸದಸ್ಯರು ದನಿಗೂಡಿಸಿದರು.
ಕಳೆದ ಹಲವು ಸಮಯದಿಂದ ತಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಕಿರಣ್ ಕೋಡಿಕಲ್, ಜಗದೀಶ್ ಶೆಟ್ಟಿ, ಸುಮಿತ್ರ ಕರಿಯ ಮೊದಲಾದವರು ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವ, ಕಿಶೋರ್ ಕೊಟ್ಟಾರಿ, ಹೇಮಲತಾ ರಘು ಸಾಲ್ಯಾನ್, ನಯನ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.
ಮಲ್ಲಿಕಟ್ಟೆ ಪಾರ್ಕ್‌ಗೆ ಕದ್ರಿ ಗೋಪಾಲನಾಥ ನಾಮಕರಣ
ಮಲ್ಲಿಕಟ್ಟೆ ಪಾರ್ಕ್‌ಗೆ ಕದ್ರಿ ಗೋಪಾಲ್‌ನಾಥ ಅವರ ಹೆಸರಿಡುವ ಕುರಿತು ಸದಸ್ಯ ಮನೋಹರ್ ಶೆಟ್ಟಿ ಅವರ ಸದಸ್ಯರ ಮನವಿ ಕುರಿತಾದ ಕಾರ್ಯಸೂಚಿಯನ್ನು ಪಟ್ಟಣ ಯೋಜನೆ ಮತ್ತು ಸುಧಾರ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲು ನಿರ್ಣಯಿಸಲಾಯಿತು.
ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳು, ಯಕ್ಷಗಾನ ಸೇರಿದಂತೆ ಕಲಾವಿದರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಮೇಯರ್ ನಿಲ್ಲಿಸಿರುವುದು ಬೇಸರದ ಸಂಗತಿ ಎಂದು ಪ್ರವೀಣ್ ಚಂದ್ರ ಆಳ್ವ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಜಯಾನಂದ್ ಅವರು, ನನ್ನ ಅವಧಿಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿದವ ನಾನು. ಈ ರೀತಿಯ ಆರೋಪ ಸರಿಯಲ್ಲ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ ಪ್ರತಿಕ್ರಿಯಿಸಿ, ತಡೆ ನೀಡಿರುವುದು ಮೇಯರ್ ಅಲ್ಲ, ಆಯುಕ್ತರು ಎಂದರು. ತಡೆದಿಲ್ಲ, ಪರಿಶೀಲನೆ ಮಾಡಲಾಗಿದ್ದು, ಶೀಘ್ರವೇ ಜಾರಿಯಾಗಲಿದೆ ಎಂದು ಆಯುಕ್ತರು ನುಡಿದರು.
ತಮ್ಮ ಅಧಿಕಾರವಧಿಯ ಕೊನೆಯ ಸಭೆ ಇದಾಗಿದ್ದು, ತನ್ನ ಆಡಳಿತಾವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮೇಯರ್ ಜಯಾನಂದ್ ಹೇಳಿದರು.
ತ್ಯಾಜ್ಯ ಸಂಗ್ರಹ ಜೀಪ್ ಟಿಪ್ಪರ್‌ಗಳ ಉದ್ಘಾಟನೆ; ವಿಪಕ್ಷ ನಾಯಕರಿಗೇ ಮಾಹಿತಿ ಇಲ್ಲ!
ಪಾಲಿಕೆ ವ್ಯಾಪ್ತಿಯ ಮನೆಗಳ ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿ ಪಾಲಿಕೆಯಿಂದ ಹೈಡ್ರಾಲಿಕ್ ಜೀಪ್ ಟಿಪ್ಪರ್‌ಗಳನ್ನು ಖರೀದಿಸಲಾಗಿದ್ದು, ಪಾಲಿಕೆ ಸಾಮಾನ್ಯ ಸಭೆಯ ಬಳಿಕ ಅವುಗಳ ಉದ್ಘಾಟನೆಗೆ ನಿರ್ಧರಿಸಲಾಗಿತ್ತು. ಆದರೆ ಈ ಬಗ್ಗೆ ವಿಪಕ್ಷ ನಾಯಕರಿಗೇ ಮಾಹಿತಿ ನೀಡಲಾಗಿಲ್ಲ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯ ಬಳಿಕ ಮೇಯರ್ ಜಯಾನಂದ್ ಅವರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿಸಲಾಯಿತು.







