ಉಪ್ಪಿನಂಗಡಿ | ಅಡಿಕೆ ಅಂಗಡಿಯಿಂದ ನಗದು ಕಳವು ಪ್ರಕರಣ : ಆರೋಪಿಗಳು ಪೊಲೀಸ್ ವಶಕ್ಕೆ

ಉಪ್ಪಿನಂಗಡಿ, ಡಿ.11: ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ಡ್ರಾಯರ್‌ನಲ್ಲಿದ್ದ 5 ಲಕ್ಷ ರೂ.ಹಾಗೂ ದಾಖಲೆ ಪತ್ರ, ಚೆಕ್‌ಗಳಿದ್ದ ಬ್ಯಾಗ್ ಅನ್ನು ದೋಚಿದ ಪ್ರಕರಣದ ಆರೋಪಿಗಳನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸರು ಬಂಧಿಸಿದ್ದು, ಈ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮೂಡಿಗೆರೆ ನಿವಾಸಿಗಳಾದ ಮುಹಮ್ಮದ್ ಶಹಬಾದ್ (26), ಜಂಶೀದ್ (25) ಬಂಧಿತ ಆರೋಪಿಗಳು.
ಎನ್.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಯೊಂದರಿಂದ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಬಂಧಿತರಾಗಿದ್ದರು. ಅಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಉಪ್ಪಿನಂಗಡಿಯಲ್ಲಿ ನಡೆಸಿರುವ ಕಳ್ಳತನದ ಬಗ್ಗೆಯೂ ಬಾಯಿಬಿಟ್ಟಿದ್ದು, ಅದರಂತೆ ಈ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ನಡೆಸಿದರು.
ಅ.27ರಂದು ಇಲ್ಲಿನ ಗಾಂಧಿ ಪಾರ್ಕ್ ಬಳಿಯ ಶ್ರೀರಾಮ ಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ ಗುಂಡಿಜೆ ಎಂಬವರಿಗೆ ಸೇರಿದ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರದಲ್ಲಿ ಕಳವು ನಡೆದಿತ್ತು. ಅಂದು ಮಧ್ಯಾಹ್ನ ಅಂಗಡಿಯ ಮಾಲಕ ಶೆಟರ್ ತೆರೆದಿಟ್ಟು ಕ್ಯಾಷ್ ಡ್ರಾವರ್‌ಗೆ ಬೀಗ ಹಾಕಿ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಕ್ಯಾಷ್ ಡ್ರಾವರ್ ಮುರಿದು ಹಾಕಲಾಗಿದ್ದು, ಇದರೊಳಗೆ ಇದ್ದ 5 ಲಕ್ಷ ರೂ. ಕಳವುಗೈಯಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸ್ಥಳ ಮಹಜರು: ಎನ್.ಆರ್.ಪುರ ಪೊಲೀಸರಿಂದ ಇಲ್ಲಿನ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜು ನೇತೃತ್ವದ ಪೊಲೀಸ್ ತಂಡ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ಉಪ್ಪಿನಂಗಡಿ ಠಾಣೆಗೆ ಕರೆತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿ, ಪ್ರಕರಣ ದಾಖಲಿಸಿದ್ದಾರೆ.







