ಉಪ್ಪಿನಂಗಡಿ: ಮಣ್ಣಗುಂಡಿಯಲ್ಲಿ ಮತ್ತೆ ಹೆದ್ದಾರಿಗೆ ಗುಡ್ಡ ಕುಸಿತ

ಉಪ್ಪಿನಂಗಡಿ: ರಾಷ್ಟೀಯ ಹೆದ್ದಾರಿ 75 ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಹೆದ್ದಾರಿ ಬದಿಯ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತಡೆಯುಂಟಾದ ಘಟನೆ ಸೋಮವಾರ ಸಂಭವಿಸಿದೆ.
ಸೋಮವಾರ ಮುಂಜಾನೆ 4.50 ರ ವೇಳೆ ಗುಡ್ದ ಕುಸಿತವುಂಟಾಗಿ ಮರಗಳ ಸಹಿತ ಮಣ್ಣಿನ ರಾಶಿ ಹೆದ್ದಾರಿಗೆ ಹರಿದು ಬಂದಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿ ಘನ ವಾಹನಗಳ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು. ಘಟನೆ ಸಂಭವಿಸಿದಾಕ್ಷಣ ನೆಲ್ಯಾಡಿ ಹೊರಠಾಣಾ ಎಎಸೈ ದೇವಪ್ಪ , ಸಿಬ್ಬಂದಿ ನಂದನ್ , ದಯಾನಂದ, ರವಿರಾಜ್ , ಸದಾಶಿವ ರವರು ಬಹುತೇಕ ವಾಹನಗಳನ್ನು ಗೋಳಿತೊಟ್ಟು - ಕೊಕ್ಕಡ - ಪೆರಿಯಶಾಂತಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಿ ಬಹಳಷ್ಟು ವಾಹನಗಳನ್ನು ಕಾಯುವ ಶಿಕ್ಷೆಯಿಂದ ಪಾರು ಪಾಡಿದರು. ಮೂರು ಹಿಟಾಚಿ , ಒಂದು ಮಣ್ಣನ್ನು ಸರಿಸುವ ಯಂತ್ರವನ್ನು ಬಳಸಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ಹೆದ್ದಾರಿ ಸಂಚಾರ ಪುನರಾರಂಭಗೊಂಡಿತು.
ಸತತ 6 ನೇ ಬಾರಿಯ ಅವಘಡ: ಹೆದ್ದಾರಿ ವಿಸ್ತರಣೆಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕಡಿದ ಪರಿಣಾಮ ಈ ಬಾರಿಯ ಮಳೆಗಾಲದಲ್ಲಿ ಪದೇ ಪದೇ ಇಲ್ಲಿ ಗುಡ್ಡ ಕುಸಿತವುಂಟಾಗುತ್ತಿದ್ದು , ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗುತ್ತಿದೆ. ಈ ಹಿಂದೆಲ್ಲಾ ಒಂದು ಹಿಟಾಚಿಯನ್ನು ಬಳಸಿ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ನಡೆಸುತ್ತಿದ್ದ ಬಗ್ಗೆ ಪತ್ರಿಕಾ ವರದಿಯು ಬೆಳಕು ಚೆಲ್ಲಿದ ಪರಿಣಾಮ ಈ ಬಾರಿ ನಾಲ್ಕು ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆ ಮಾಡಲಾಗಿದೆ. ಇದರ ಪರಿಣಾಮ ಮುಂಜಾನೆ 4.30 ರ ಸುಮಾರಿಗೆ ತಡೆ ಹಿಡಿಯಲ್ಪಟ್ಟ ಹೆದ್ದಾರಿ ಸಂಚಾರ ಬೆಳಗ್ಗೆ 8.50 ರ ಸುಮಾರಿಗೆ ಮಣ್ಣು ತೆರವುಗೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭವಾಯಿತು.
ಈ ಬಾರಿಯೂ ಹೆದ್ದಾರಿ ಸಂಚಾರ ತಡೆಗೊಂಡಾಗ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ರವಾನಿಸಿ ವಾಹನಗಳು ಪರ್ಯಾಯ ರಸ್ತೆಯನ್ನವಲಂಬಿಸಲು ಸಲಹೆ ನೀಡಿದ್ದು ಪ್ರಯೋಜನ ಕಾರಿ ಎನಿಸಿತು. ರಾಷ್ಟ್ರೀಯ ಹೆದ್ದಾರಿಯ ಸುರಕ್ಷತೆಗೆ ಸವಾಲಾಗಿರುವ ಈ ಭಾಗದಲ್ಲಿ ಗುಡ್ಡ ಕುಸಿತವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ಅನುಷ್ಠಾನಿಸಬೇಕೆನ್ನುವುದು ನಾಗರಿಕ ವಲಯದ ಅಗ್ರಹವಾಗಿದೆ.







