Uppinangady | ಬಜತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕೃಷಿ ನಾಶ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿನ ನಿವಾಸಿ ಮೋಹನದಾಸ್ ಕಾಮತ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆಗಿಡ ಸಹಿತ ಕೃಷಿ ಬೆಳೆಗಳನ್ನು ನಾಶ ಮಾಡಿದ ಬಗ್ಗೆ ವರದಿಯಾಗಿದೆ.
ಶುಕ್ರವಾರ ನಸುಕಿನ 3.15 ರ ಸುಮಾರಿಗೆ ನಾಯಿಗಳು ವಿಪರೀತ ಬೊಗಳಲಾರಂಭಿಸಿದ್ದು, ಈ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ತೋಟದಲ್ಲಿದ್ದ ಬಾಳೆಗಿಡಗಳನ್ನು ಧ್ವಂಸಗೊಳಿಸಿದ್ದವು. ಅವುಗಳ ಸಂಚಾರದಿಂದ ತೋಟದಲ್ಲಿ ಅಳವಡಿಸಲಾದ ನೀರಿನ ಪೈಪು ಲೈನ್‍ಗಳು ಹಾನಿಗೀಡಾಗಿದೆ ಹಾಗೂ ತೋಟದ ಸುರಕ್ಷತೆಗೆ ಹಾಕಿದ್ದ ಬೇಲಿಯನ್ನೂ ಧ್ವಂಸಗೊಳಿಸಿವೆ. ತೋಟದಲ್ಲಿ ಇರಿಸಲಾದ ಜೇನು ಪೆಟ್ಟಿಗೆಗಳೂ ಕಾಡಾನೆಯ ದಾಳಿಗೆ ಹಾನಿಗೀಡಾಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ದೂರಿದ್ದಾರೆ.
ಮಳೆಗಾಲ ಆರಂಭವಾದಗಿನಿಂದ ಇದು ಮೂರನೇ ಬಾರಿಯ ಕಾಡಾನೆ ದಾಳಿಯಾಗಿದ್ದು, ಈ ಮೊದಲು 2 ಬಾರಿ ಆನೆಗಳು ತೋಟದ ಪರಿಸರದಲ್ಲಿ ಶಾಂತವಾಗಿ ಸಂಚರಿಸುತ್ತಾ ಸಾಗಿದ್ದರೆ, ಈ ಬಾರಿ ಎಲ್ಲಾ ಕೃಷಿ ಬೆಳೆಗಳನ್ನು ಹಾನಿಗೀಡು ಮಾಡಿದೆ ಎಂದು ಮೋಹನದಾಸ ಕಾಮತ್ ರವರು ತಿಳಿಸಿದ್ದಾರೆ.





