ಉಪ್ಪಿನಂಗಡಿ | ಬೆಳೆ ವಿಮೆಯಲ್ಲಿ ಕೃಷಿಕರಿಗೆ ಅನ್ಯಾಯ ಆರೋಪ: ಸಿಎ ಬ್ಯಾಂಕ್‌ನಿಂದ ಮನವಿ

ಉಪ್ಪಿನಂಗಡಿ, ಡಿ.11: ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ಮೊತ್ತದಲ್ಲಿ ಕೃಷಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರಿ ಯಂತ್ರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್‌ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಅಡಿಕೆ ಕೃಷಿಕರ ವಿಚಾರದಲ್ಲಿ ಎಕರೆಯೊಂದಕ್ಕೆ 2,590 ರೂ. ವಿಮಾ ಕಂತು ಪಾವತಿಸಿದರೆ ಕೇಂದ್ರ ಸರಕಾರ 5,180 ರೂ. ಹಾಗೂ ರಾಜ್ಯ ಸರಕಾರ 10,360 ರೂ. ವಿಮಾ ಕಂತು ಪಾವತಿಸುತ್ತದೆ. ಒಟ್ಟು 18,130 ರೂ. ವಿಮಾ ಕಂತನ್ನು ಪಡೆದು ಎಕರೆಗೆ ಕೇವಲ 10,441 ರೂ. ಹಣವನ್ನು ವಿಮಾ ಪರಿಹಾರ ಧನವಾಗಿ ಬಿಡುಗಡೆ ಮಾಡಿರುವುದು ಅತಿ ವೃಷ್ಠಿಯಿಂದ ಹಾನಿಗೀಡಾದ ಕೃಷಿಕರಿಗೆ ಮಾಡಿರುವ ಅನ್ಯಾಯವಾಗಿದೆ. ಈ ಬಗ್ಗೆ ರಾಜ್ಯ ಸರಕಾರ ತ್ವರಿತಗತಿಯಲ್ಲಿ ಮಧ್ಯ ಪ್ರವೇಶಿಸಿ ಕೃಷಿಕರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸಲ್ಲಿಸಿದ ನಿಯೋಗದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕ ರಾಜೇಶ್, ವಸಂತ ಗೌಡ ಪಿಜಕ್ಕಳ, ಉಷಾ ಮುಳಿಯ, ಸಂಧ್ಯಾ, ಸುಂದರ ಎನ್., ಬಜತ್ತೂರು ಗ್ರಾಪಂ ಅಧ್ಯಕ್ಷ ಗಂಗಾಧರ ಪಿ.ಎನ್., ಸದಸ್ಯರಾದ ಸಂತೋಷ್ ಪರ್ದಾಂಜೆ, ಹಿರೆಬಂಡಾಡಿ ಗ್ರಾಪಂ ಸದಸ್ಯ ಸೌಕತ್ ಅಲಿ, ಉಪ್ಪಿನಂಗಡಿ ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ಸದಾನಂದ ನೆಕ್ಕಿಲಾಡಿ, ಜನಾರ್ದನ ಹಿರೆಬಂಡಾಡಿ ಭಾಗವಹಿಸಿದ್ದರು.





