ಕೊಳ್ತಮಜಲು ಸಮಸ್ತ ಮದ್ರಸ ಆಡಳಿತ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಹತ್ಯೆ: ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್, ಮದ್ರಸ ಮ್ಯಾನೇಜ್ಮೆಂಟ್ ಖಂಡನೆ

ಉಪ್ಪಿನಂಗಡಿ: ಬಂಟ್ವಾಳ ತಾಲ್ಲೂಕಿನ ಕುರಿಯಾಳ ಸಮೀಪದ ಇರಾಕೋಡಿಯ ಕೊಳತ್ತಮಜಲು ನಿವಾಸಿ ರಹ್ಮಾನ್ (34) ಎಂಬವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿ, ಜೊತೆಗಿದ್ದ ಶಾಫಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾದ ಘಟನೆಯನ್ನು ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಖಂಡಿಸಿದೆ.
ಪ್ರಸ್ತುತ ಕರಾವಳಿಯು ಅಭದ್ರತೆಯ ವಾತಾವರಣದಲ್ಲಿದ್ದು ದಿನನಿತ್ಯದ ಜನಜೀವನ ಕೂಡ ಕಷ್ಟಕರವಾಗಿ ಪರಿಣಮಿಸಿದೆ. ನಗರದ ಹೊರವಲಯದ ಕುಡುಪು ಬಳಿ ಗುಂಪಿನಿಂದ ಹಲ್ಲೆ ಮಾಡಿ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಮಾನಸಿಕ ಅಸ್ವಸ್ಥ ಮುಹಮ್ಮದ್ ಅಶ್ರಫ್ ಎಂಬಾತನನ್ನೂ ಕೊಲೆ ಮಾಡಲಾಯಿತು. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಸರಣಿ ಕೊಲೆಗಳು ಮತ್ತು ಮಾರಣಾಂತಿಕ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದು ಇದಕ್ಕೆ ಯಾವುದೇ ಸೂಕ್ತ ಕ್ರಮಗಳು ನಡೆಯುತ್ತಿಲ್ಲ. ಮಾತ್ರವಲ್ಲ ಕೋಮು ದ್ವೇಷ ಭಾಷಣ ಹರಡುವ ಕೋಮುವಾದಿಗಳಿಗೂ ಯಾವುದೇ ಕಡಿವಾಣ ಬೀಳುತ್ತಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಅಪರಾಧಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೆಯೇ ಮೃತ ರಹೀಮರ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಮತ್ತು ಹಲ್ಲೆಗೊಳಗಾದ ಶಾಫಿಯ ಚಿಕಿತ್ಸೆಗೆ ಸ್ಪಂದಿಸಿ ನ್ಯಾಯ ದೊರಕಿಸಬೇಕೆಂದು ಈ ಮೂಲಕ SKJMCC ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಉಪ್ಪಿನಂಗಡಿ ರೇಂಜ್ ಈ ಮೂಲಕ ಸರಕಾರಕ್ಕೆ ಒತ್ತಾಯಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.