ಉಪ್ಪಿನಂಗಡಿ | ಇಳಂತಿಲ ಗ್ರಾಪಂ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಅವಿರೋಧ ಆಯ್ಕೆ

ಉಪ್ಪಿನಂಗಡಿ : ಅವಿಶ್ವಾಸ ಮಂಡನೆಯ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಗಮನ ಸೆಳೆದ ಇಳಂತಿಲ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಕುಮಾರ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎನ್ಮಾಡಿ ನಿವಾಸಿಯಾಗಿರುವ ವಸಂತ ಕುಮಾರ್ ಶೆಟ್ಟಿಯವರು ಬಿಜೆಪಿ ಕಾರ್ಯಕರ್ತರಾಗಿದ್ದು, ಎರಡನೇ ಅವಧಿಗೆ ಇಳಂತಿಲ ಗ್ರಾಪಂಗೆ ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು. 14 ಸದಸ್ಯ ಬಲವಿರುವ ಇಳಂತಿಲ ಗ್ರಾಪಂ ನಲ್ಲಿ 11 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರೆ, 2 ಕಾಂಗ್ರೆಸ್ ಬೆಂಬಲಿತ ಹಾಗೂ ಒಬ್ಬರು ಎಸ್‍ಡಿಪಿಐ ಬೆಂಬಲಿತ ಸದಸ್ಯರಾಗಿದ್ದಾರೆ. ಈ ಹಿಂದೆ ಗ್ರಾಪಂ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ತಿಮ್ಮಪ್ಪ ಗೌಡ ಅವರಿದ್ದರು. ಆದರೆ ಇವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಗ್ರಾಪಂ ಸದಸ್ಯರಾದ ವಸಂತ ಕುಮಾರ್ ಶೆಟ್ಟಿ, ವಿಜಯಕುಮಾರ್, ಚಂದ್ರಿಕಾ ಭಟ್, ಉಷಾ ಯು., ಸುಪ್ರೀತ್ ಪಿ., ಸಿದ್ದೀಕ್, ಯು.ಕೆ. ಈಸುಬು, ಕುಸುಮ, ನುಸ್ರುತ್ ಹೀಗೆ 9 ಮಂದಿ ಪುತ್ತೂರು ಸಹಾಯಕ ಕಮಿಶನರ್ ಗೆ ಮನವಿ ಸಲ್ಲಿಸಿದ್ದರು.
ಬಳಿಕ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಸೂಚನಾ ಸಭೆ ನಡೆದಾಗ ಈ ಒಂಬತ್ತು ಮಂದಿ ಸದಸ್ಯರಲ್ಲದೇ, ಗ್ರಾಪಂ ಉಪಾಧ್ಯಕ್ಷೆ ಸವಿತಾ ಎಚ್., ಸದಸ್ಯರಾದ ಉಷಾ ಎಂ., ಜಾನಕಿ ಅವರು ಕೂಡಾ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದರು. ಹೀಗಾಗಿ ತಿಮ್ಮಪ್ಪ ಗೌಡ ಅವರು ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವಂತಾಗಿತ್ತು. ಬಳಿಕ ಹಂಗಾಮಿ ಅಧ್ಯಕ್ಷರನ್ನಾಗಿ ಗ್ರಾಪಂ ಉಪಾಧ್ಯಕ್ಷೆಯಾಗಿದ್ದ ಸವಿತಾ ಅವರನ್ನು ನೇಮಿಸಿ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಆದೇಶ ಹೊರಡಿಸಿದ್ದರು.
ಎ.16ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು, ಈ ಸಂದರ್ಭ ವಸಂತ ಕುಮಾರ್ ಶೆಟ್ಟಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಹಾಗೂ ಹಂಗಾಮಿ ಅಧ್ಯಕ್ಷೆಯಾಗಿದ್ದ ಸವಿತಾ ಎಚ್., ಸದಸ್ಯರಾದ ಚಂದ್ರಿಕಾ ಭಟ್, ಈಸುಬು, ಸಿದ್ದೀಕ್, ಉಷಾ ಎಂ.ಎಸ್., ವಿಜಯಕುಮಾರ್, ರಮೇಶ್, ಜಾನಕಿ ಉಪಸ್ಥಿತರಿದ್ದರು. ಅವಿರೋಧ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ತಿಳಿದಿದ್ದರಿಂದ ಸದಸ್ಯರಾದ ಉಷಾ ಎಂ., ಕುಸುಮ, ನುಸ್ರತ್, ಸುಪ್ರೀತ್ ಸಭೆಗೆ ಗೈರು ಹಾಜರಾಗಿದ್ದರು. ಇವರೊಂದಿಗೆ ನಿಕಟಪೂರ್ವಾಧ್ಯಕ್ಷ ತಿಮ್ಮಪ್ಪ ಗೌಡ ಕೂಡಾ ಸಭೆಗೆ ಗೈರು ಹಾಜರಿಯಾಗಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಕಂದಾಯ ಇಲಾಖೆಯ ಉಪತಹಶೀಲ್ದಾರ್ ಬಿ. ಕೊರಗಪ್ಪ ಹೆಗ್ಡೆ ಚುನಾವಣೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.