ಗೇರು ಅಭಿವೃದ್ಧಿಗೆ ಅನುದಾನ ಘೋಷಿಸಲು ಸರಕಾರಕ್ಕೆ ಒತ್ತಾಯ : ಯು.ಟಿ.ಖಾದರ್

ಮಂಗಳೂರು, ನ.16: ಗೇರು ಬೆಳೆಗಾರರು ಹಾಗೂ ಉದ್ಯಮಕ್ಕೆ ಸಂಬಂಧಿಸಿದಂತೆ ಪೂರಕವಾದ ಬೇಡಿಕೆಗಳನ್ನು ಸಿದ್ಧಪಡಿಸಿ ಇಟ್ಟಲ್ಲಿ ಮುಂದಿನ ಬಜೆಟ್‌ನಲ್ಲಿ ಅನುದಾನಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಗೋಡಂಬಿ ಕಾರ್ಖಾನೆ ಸ್ಥಾಪನೆ ಯಾದ 100ನೇ ವರ್ಷದ ಸ್ಮರಣಾರ್ಥ ಕರ್ನಾಟಕ ಗೋಡಂಬಿ ತಯಾರಕರ ಸಂಘದ (ಕೆಸಿಎಂಎ) ವತಿ ಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ‘ಕಾಜು ಶತಮಾನೋತ್ಸವ ಸಮ್ಮೇಳನ’ದ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅರಣ್ಯ, ಕೃಷಿ, ಕಂದಾಯ ಸಚಿವರು, ಅಧಿಕಾರಿಗಳು, ಫ್ಯಾಕ್ಟರಿ ಮಾಲಕರು ಜೊತೆಯಾಗಿ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು. ಅದಕ್ಕೆ ಪೂರಕವಾಗಿ ಬೇಡಿಕೆ ಪಟ್ಟಿ ಸಿದ್ಧವಾಗಬೇಕು. ಗ್ರಾಮೀಣ ಭಾಗದಲ್ಲಿ ಅನೇಕರು ಗೇರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಡಂಬಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಗೇರು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಲಾಭದಾಯಕವಾಗಲಿದೆ ಎಂದವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದೇಶದಲ್ಲಿ 2 ತಿಂಗಳು ಮಾತ್ರ ನಮ್ಮಲ್ಲಿ ಗೇರು ಲಭ್ಯವಾದರೆ ಉಳಿದ 10 ತಿಂಗಳು ವಿದೇಶದ ಗೋಡಂಬಿಯನ್ನು ಅವಲಂಬಿಸಬೇಕಾ ಗಿದೆ. ಬೇಡಿಕೆ ಇರುವಷ್ಟು ಗೇರು ರಾಜ್ಯದಲ್ಲಿ ಸಿಗುತ್ತಿಲ್ಲ. ಅಭಾವ ನಿವಾರಿಸಲು ಗೇರು ಅಭಿವೃದ್ಧಿ ನಿಗಮದ ಮೂಲಕ ರಾಜ್ಯದೆಲ್ಲೆಡೆ ಲಕ್ಷಾಂತರ ಗೇರು ಗಿಡಗಳನ್ನು ಬೆಳೆಸಲು ಸರಕಾರ ಕ್ರಮವಹಿಸಬೇಕು. ಹಿಂದೆ ಗೇರು ಬೆಳೆಯುವ ಪ್ರದೇಶಗಳಲ್ಲಿ ಮಾತ್ರ ಕಾರ್ಖಾನೆಗಳಿದ್ದವು. ಆದರೆ ಗೇರು ಆಮದು ಮಾಡಲು ಆರಂಭಿಸಿದ ಬಳಿಕ ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಗೋಡಂಬಿ ಕಾರ್ಖಾನೆಗಳು ಆರಂಭವಾಗಿದೆ. ಅಲ್ಲಿನ ಗ್ರಾಹಕರು ಅಲ್ಲೇ ಉತ್ಪನ್ನ ಖರೀದಿಸಲು ಮುಂದಾದರೆ ಇಲ್ಲಿನ ಕಾರ್ಖಾನೆಗಳಿಗೆ ಅಪಾಯ ಎದುರಾಗುತ್ತದೆ. ಕಷ್ಟದ ದಿನಗಳನ್ನು ಗಮನಿಸಿದಾಗ ಮಂಗಳೂರು ಟೈಲ್ಸ್, ಬೀಡಿ ಉದ್ಯಮದಂತೆ ಕಾಜು ಉದ್ಯಮ ಕೂಡ ಅವನತಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ. ಪ್ರಪಂಚಕ್ಕೆ ಅತ್ಯುತ್ತಮ ಗೋಡಂಬಿ ಒದಗಿಸುವ ಕರ್ನಾಟಕ, ಕರಾವಳಿಯ ಕಾರ್ಖಾನೆಗಳನ್ನು ಉಳಿಸಬೇಕಿದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದೆ. ಕೃಷಿಗೆ ಕರಾವಳಿಯಲ್ಲಿ ಮಹತ್ವವಿದೆ. ಗೋಡಂಬಿ ಉದ್ಯಮ ಕೂಡ ಆರ್ಥಿಕತೆ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ರಾಜ್ಯ, ಕೇಂದ್ರ ಸರಕಾರಗಳು ಗೇರು ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದರು.
ಸಮಾರಂಭದಲ್ಲಿ ಗೇರು ಬೇಸಾಯದ ಸಮಗ್ರ ವರದಿ ಒಳಗೊಂಡ ಪುಸ್ತಕ ಬಿಡುಗಡೆ ಗೊಳಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಪೇಜಾವರ ಮಠದ ಪ್ರತಿನಿಧಿ ವಾಸುದೇವ ಭಟ್, ಕಾಜು ಶತಮಾನೋತ್ಸವ ಸಮ್ಮೇಳನ ಸಮಿತಿಯ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್, ಅಮಿತ್ ಪೈ, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಎ.ಕೆ.ರಾವ್ ಸ್ವಾಗತಿಸಿದರು. ಸುಬ್ರಾಯ ಪೈ ವಂದಿಸಿದರು. ಶರ್ಮಿಳಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದಲ್ಲಿ 5 ಲಕ್ಷ ಟನ್ ಗೇರು ಬೇಡಿಕೆ ಇದ್ದು, 50 ಸಾವಿರ ಟನ್ ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಶೇ.90ರಷ್ಟು ಬೆಳೆ ಯನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಜಾಸ್ತಿಯಾಗ ಲಿದ್ದು, ಈ ವೇಳೆ ಎದುರಾಗಲಿರುವ ಗೇರು ಅಭಾವವನ್ನು ನಿವಾರಿಸಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಜಯ ಲಕ್ಷ್ಮೀ ಪ್ರತಿಷ್ಠಾನದಿಂದ ರಾಜ್ಯದೆಲ್ಲೆಡೆ ರೈತರಿಗೆ ಉಚಿತವಾಗಿ ಗೇರು ಗಿಡಗಳನ್ನು ವಿತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಭಿಯಾನದ ಮೂಲಕ ಸುಮಾರು 12 ಲಕ್ಷ ಗಿಡಗಳನ್ನು ವಿತರಿಸಲಾಗಿದ್ದು, ರೈತರಿಗೆ ಮಾಹಿತಿ ನೀಡಿ ಬೆಳೆಸಲಾಗುತ್ತಿದೆ.
-ಅನಿಲ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿವರ್ಹಣಾಧಿಕಾರಿ







