ಉಮ್ಮೀದ್ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿ ಅಪ್ಲೋಡ್ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಕೇಂದ್ರದಲ್ಲಿ ಕಾಲ್ ಸೆಂಟರ್ ಅಗತ್ಯ: ಯು.ಟಿ. ಖಾದರ್

ಮಂಗಳೂರು: ವಕ್ಫ್ ಸಂಸ್ಥೆಗಳ ಹಾಗೂ ಆಸ್ತಿ ವಿವರಗಳನ್ನು ಪೋರ್ಟಲ್ ಗಳಲ್ಲಿ ಅಪ್ಲೋಡ್ ಮಾಡುವ ವೇಳೆ ಎದುರಾಗುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ದಿನದ 24 ಗಂಟೆಯೂ ಸೇವೆ ಒದಗಿಸುವ ಕಾಲ್ ಸೆಂಟರ್ ಆರಂಭಿಸುವಂತೆ ವಿಧಾನ ಸಭೆಯ ಸ್ಪೀಕರ್ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಶ್ರಯದಲ್ಲಿ ಬುಧವಾರ ನಗರದ ಪುರಭವನದ ಮಿನಿ ಹಾಲ್‌ನಲ್ಲಿ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಂಸ್ಥೆಗಳ ಹಾಗೂ ಆಸ್ತಿ ವಿವರಗಳನು ‘ಉಮ್ಮಿದ್ - 2025’ಪೋರ್ಟಲ್‌ನಲ್ಲಿ ಅಪ್ಲೋಡ್ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಜ್ಯದಲ್ಲಿ ಹಿಂದೆ ಅಕ್ರಮ ಸಕ್ರಮ ಅವಕಾಶದಲ್ಲಿ ತಮ್ಮ ಸಂಸ್ಥೆಗೆ ಸೇರಿದ ಜಮೀನನ್ನು ಆಯಾ ಜಮಾಅತ್ ಕಮಿಟಿ ಸಕ್ರಮ ಮಾಡಲು ಆಸಕ್ತಿ ವಹಿಸದ ಕಾರಣದಿಂದಾಗಿ ಕೆಲವು ಜಮಾಅತ್‌ಗಳಲ್ಲಿ ದಾಖಲೆ ಸರಿ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ವಕ್ಫ್ ಸಂಸ್ಥೆಗಳ ಆಸ್ತಿ ವಿವರಗಳನ್ನು ಅಪ್ಲೋಡ್ ಮಾಡಲು ಸ್ಥಳೀಯವಾಗಿ ಇರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳ ನೆರವು ಪಡೆಯಬೇಕು. ಅವರ ಮೂಲಕ ಯಾವುದೇ ಗೊಂದಲವಿಲ್ಲದೆ ಶೀಘ್ರವಾಗಿ ಉಮ್ಮೀದ್ ಪೋರ್ಟಲ್‌ನಲ್ಲಿ ಆಸ್ತಿಯ ವಿವರ ದಾಖಲಿಸಲು ಸಾಧ್ಯ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಸ್ಕ್ರೀನಿಂಗ್ ಕಮಿಟಿ ಹಾಲಿ ಚೇರ್ಮೆನ್ ಅನ್ವರ್ ಬಾಷ ಕೆ ಸಾಹೇಬ್ ಚಿತ್ರದುರ್ಗ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಎಲ್ಲಡೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ನಡುವೆ ರಾಜ್ಯದಲ್ಲಿ ವಕ್ಫ್ ಸಚಿವರ ಸೂಚನೆ ಮೇರೆಗೆ ವಕಫ್ ಸಂರಕ್ಷಣೆಯ ಬಗ್ಗೆ ಕಾರ್ಯಗಾರಗಳು ನಡೆದಿದೆ. ಇದೀಗ ಉಮ್ಮಿದ್ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಡಿ.5ರ ಮೊದಲು ದಾಖಲಿಸುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ ಎಂದರು.
ವಕ್ಫ್ ಆಸ್ತಿಗಳನ್ನು ಉಮ್ಮೀದ್ ಪೋರ್ಟಲ್‌ನಲ್ಲಿ ನಿಗದಿತ ಸಮಯದೊಳಗೆ ದಾಖಲಿಸಲಿಸದಿದ್ದರೆ. ಸರಕಾರಕ್ಕೆ ಏನು ತೊಂದರೆ ಇಲ್ಲ. ನಮಗೆ ಮಾತ್ರ ತೊಂದರೆ ಇದೆ. ಮುಂದೆ ಕೋರ್ಟ್‌ಗೆ ಅನುಮತಿಗಾಗಿ ಅಲೆದಾಡಬೇಕಾಗುತ್ತದೆ. ಅಲ್ಲದೆ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಾಗ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಆಸ್ತಿ ವಿವರ ನೀಡಲು 13 ದಾಖಲೆಗಳು ಬೇಕಾಗುತ್ತದೆ. ಈ ಪೈಕಿ 6 ದಾಖಲೆಗಳು ಅಪ್ಲೋಡ್ ಮಾಡುವ ಸಮಿತಿಯ ಕಾರ್ಯದರ್ಶಿಯ ವೈಯಕ್ತಿಕ ದಾಖಲೆಯಾದ ಆಧಾರಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್, ಪೋಟೊ, ಪೋನ್ ನಂಬ್ರ ಮತ್ತು ಇಮೇಲ್ ವಿವರ ಆಗಿರುತ್ತದೆ. ಎಂದರು.
ಈಗಾಗಲೇ ಜಮಾಅತ್ ಕಮಿಟಿಯ ಅಧಿಕಾರದ ಅವಧಿ ಮುಗಿದಿದ್ದರೆ ಅವರಿಗೆ ಮೂರು ತಿಂಗಳು ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.
ಜಮಾಅತ್ ಕಮಿಟಿಯ ಸ್ವಾಧೀನದಲ್ಲಿರುವ ಮಸೀದಿ, ಮದ್ರಸ, ದರ್ಗಾ ಇರುವ ಜಾಗಕ್ಕೆ ಸಂಬಂಧಿಸಿ ದಾಖಲೆ ಇಲ್ಲದಿಲ್ಲದೆ ಜಮೀನಿನ ಜಿಪಿಎಸ್ ಫೋಟೊ ತೆಗೆಯಬೇಕು, ಆಸ್ತಿಯ ಲೀಸ್ ಕೊಟ್ಟಿದ್ದರೆ ಅದರ ವಿವರ, ಬಾಡಿಗೆಗೆ ಕೊಟ್ಟಿದ್ದರೆ ಬಾಡಿಗೆ ಕರಾರು ಪತ್ರ, ಆಡಿಟ್ ರಿಪೋರ್ಟ್ ಸಲ್ಲಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ರಿಯಾಝ್ ಖಾನ್ ಮತ್ತು ಖಾಲಿದ್ ಅಹ್ಮದ್ ಉಮ್ಮೀದ್ ಪೋರ್ಟಲ್‌ನಲ್ಲಿ ಆಸ್ತಿ ಅಫ್ಲೋಡ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಅವರು ದ.ಕ. ಜಿಲ್ಲೆಯಲ್ಲಿ ಉಮ್ಮೀದ್ ಪೋರ್ಟಲ್‌ನಲ್ಲಿ ವಕ್ಫ್ ವ್ಯಾಪ್ತಿಯಲ್ಲಿನ 840 ಸಂಸ್ಥೆಗಳ 1,782 ಸೊತ್ತುಗಳ ಪೈಕಿ 85 ಸಂಸ್ಥೆಗಳ 840 ಆಸ್ತಿಗಳನ್ನು ಈಗಾಗಲೇ ಅಫ್ಲೋಡ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫ , ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ , ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್ ಉಡುಪಿ, ವಕ್ಫ್ ಮಾಜಿ ಅಧ್ಯಕ್ಷ ಎಸ್‌ಎಮ್ ಆರ್ ರಶೀದ್ ಹಾಜಿ, ಈ ಸಂದರ್ಭದಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಅಧ್ಯಕ್ಷ ಉಸ್ಮಾನ್ ಹಾಜಿ ಪಾಣೆಮಂಗಳೂರು, ಉಡುಪಿಯ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಹ್ಯಾ ಉಡುಪಿ, ವಕಫ್ ಕೌನ್ಸಿಲ್ ಸದಸ್ಯ ಅಬ್ದುರ‌್ರಹ್ಮಾನ್ ಕೋಡಿಜಾಲ್, ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ಬಿಜಿ ಹನೀಫ್ ಹಾಜಿ, ಮಾಜಿ ಮೇಯರ್ ಕೆ ಅಶ್ರಫ್, ಮುಡಿಪು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್ ಕೆ ಖಾದರ್ ಹಾಜಿ, ಮಿತ್ತಬೈಲ್ ಮಸೀದಿ ಅಧ್ಯಕ್ಷ ಮುಹಮ್ಮದ್ ಪರ್ಲ್ಯ, ಪ್ರಮುಖರಾದ ಎಂಎಚ್ ಮೊಹ್ದಿನ್ ಹಾಜಿ ಅಡ್ಡೂರು, ಪಕೀರಬ್ಬ ಮಾಸ್ಟರ್, ಎ ಕೆ ಜಮಾಲ್ , ಹಮೀದ್ ಕಣ್ಣೂರು, ಅಹ್ಮದ್ ಬಾವ , ನೂರುದ್ದೀನ್ ಸಾಲ್ಮರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೆರುವಾಯಿ ಮಸೀದಿ ಖತೀಬ್ ಜಾಫರ್ ಸಾದಿಕ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಪಂಪ್‌ವೆಲ್‌ನ ತಖ್ವ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ದುವಾಗೈದರು.
ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಸ್ವಾಗತಿಸಿ, ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿರು. ಅಶ್ರಫ್ ಕಿನಾರ ವಂದಿಸಿದರು.







