ಜೂ.21 ರಂದು ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ

‘ಯಕ್ಷನಂದನ’ 44ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ ಜೂ.21 ರಂದು ಸಂಜೆ 5.30 ರಿಂದ 9 ಗಂಟೆಯವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ಸಂಚಾಲಕ ಪಿ. ಸಂತೋಷ್ ಐತಾಳ ಅವರು ಮಾತನಾಡಿ, ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶೀರ್ವಚನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಹರಿಕೃಷ್ಣ ಪುನರೂರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ. ಅನೇಕ ಬಾಲ-ಬಾಲಿಕಾ ಕಲಾವಿದರು ಯಕ್ಷನಂದನ ಬಳಗದಲ್ಲಿ ಯಕ್ಷಗಾನವನ್ನು ಮುಂದಿನ ತಲೆಮಾರಿಗೂ ವರ್ಗಾಯಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.
‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರಸಂಗವನ್ನು ಪಿ. ಸುರೇಶ್ ಕುಮಾರ್ ಐತಾಳ್ ಅವರು ಬರೆದಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯಕರಾಗಿ ನಿಂತು ಉದ್ಯೋಗಾವಕಾಶ ಕಲ್ಪಿಸಿಕೊಟ ಪಿ.ವಿ. ಐತಾಳರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ಹುಟ್ಟು ಹಾಕಿದ ಶ್ರೀ ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರೀಟೇಬಲ್ ಟ್ರಸ್ಟಿನ ವತಿಯಿಂದ ಕೊಡಲ್ಪಡುವ ವಿದ್ಯಾನಿಧಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ದ್ವಿತೀಯ ಪಿ.ಯು.ಸಿ.ಯಲ್ಲಿ 5ನೇ ರ್ಯಾಂಕ್‌ಗಳಿಸಿರುವ ಅಲೋಸಿಯಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಪ್ರದ್ಯೂಮ್ನ ಆರ್. ಉರಾಳ ಹಾಗೂ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ ಎಂ.ಎಸ್.ಇ.ಎನ್.ಟಿ.ಯಲ್ಲಿ 6ನೇ ರ್ಯಾಂಕ್ ಗಳಿಸಿದ ಎ.ಜೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಡಾ.ಶಿವಪ್ರಸಾದ್ ಕಾರಂತ, ಹಾಗೂ ಐ.ಐ.ಎಸ್.ಇ.ಆರ್. ಪುಣೆಯಲ್ಲಿ ಬಿ.ಎಸ್.ಎಂ.ಎಸ್. ಡಿಗ್ರಿ ಮುಗಿಸಿ ಪಿ.ಎಚ್‌ಡಿ. ಇನ್ ನ್ಯೂರೋ ಸೈನ್ಸ್‌ನಲ್ಲಿ ಬ್ರಾಂಡೀಸ್ ಯುನಿವರ್ಸಿಟಿ, ಯು.ಎಸ್.ಎ ಗೆ ತೆರಳಲಿರುವ ಬಪ್ಪನಾಡಿನ ವಾಸುದೇವ ಕೆ. ಭಟ್ ಅವರಿಗೆ ಪುರಸ್ಕಾರ ಮಾಡಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಅಲೆವೂರಾಯ ವರ್ಕಾಡಿ, ಡಾ. ಪಿ. ಸತ್ಯಮೂರ್ತಿ ಐತಾಳ, ಪಿ. ಸುರೇಶ್ ಕುಮಾರ್ ಐತಾಳ, ವೃಂದಾ ಕೊನ್ನಾರ್ ಭಾಗವಹಿಸಿದ್ದರು.







