ಮತ್ತೆ ದುರ್ವಾಸನೆ ಬೀರುತ್ತಿರುವ ವಾಮಂಜೂರಿನ ವೈಟ್ ಗ್ರೊ ಅಗ್ರಿ ಎಲ್ಎಲ್‌ಪಿ ಅಣಬೆ ತಯಾರಿಕಾ ಘಟಕ: ಆರೋಪ
ಗ್ರಾಮಸ್ಥರಿಂದ ದ.ಕ.ಜಿಲ್ಲಾಡಳಿತ ವಿರುದ್ಧ ಆಕ್ರೋಶ

ಬಜ್ಪೆ, ಆ.3: ಇಲ್ಲಿನ ವೈಟ್ ಗ್ರೊ ಅಗ್ರಿ ಎಲ್ಎಲ್ ಪಿ ಅಣಬೆ ತಯಾರಿಕಾ ಘಟಕದಲ್ಲಿ ಮತ್ತೆ ದುರ್ವಾಸನೆ ಬೀರುತ್ತಿದ್ದು, ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಘಟಕ ಮುಚ್ಚಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲದಿದ್ದರೆ ಸಾಮೂಹಿಕ ದಯಾಮರಣಕ್ಕೆ ಅವಕಾಶ ನೀಡಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಿಂಗಳ ಹಿಂದೆ ಈ ಘಟಕದಲ್ಲಿ ದುರ್ವಾಸನೆ ಮಿಶ್ರಿತ ವಿಷಗಾಳಿಯಿಂದ ಶ್ವಾಸಕೋಶದ ತೊಂದರೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿದ್ದು, ಈ ಘಟಕವನ್ನು ಮುಚ್ಚಬೇಕೆಂದು ಗ್ರಾಮಸ್ಥರು ಪ್ರತಿಭಟನೆಯನ್ನು ಮಾಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ತಕ್ಷಣಕ್ಕೆ ಬರುವಂತೆ ಅಣಬೆ ತಯಾರಿಕಾ ಘಟಕವನ್ನು ಮುಚ್ಚುವಂತೆ ಆದೇಶಿಸಿದ್ದರು. ಬಳಿಕ ದಿನಗಳಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ 5ಮಂದಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿ ಘಟಕದಲ್ಲಿ ದುರ್ವಾಸನೆ ಮತ್ತು ವಿಷಾನಿಲ ಸೋರಿಕೆಯಾಗದಂತೆ ತಡೆಗಟ್ಟಿದ ಕುರಿತು ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಪುನರ್ ಆದೇಶಿಸುವುದಾಗಿ ತಿಳಿಸಿದ್ದರು.
ಸಮಿತಿಯ ಸದಸ್ಯರು ಇತ್ತೀಚೆಗೆ ತಮ್ಮ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದು, ದುರ್ವಾಸನೆ ಬೀರದಂತೆ ಘಟಕದ ಮುಖ್ಯಸ್ಥರು ಕ್ರಮ ಕೈಗೊಂಡಿರುವ ಕುರಿತು ವರದಿಯ ನೀಡಿದ್ದರು. ಈ ವರದಿಯ ಬಳಿಕ ಘಟಕಕ್ಕೆ ಒಂದು ವಾರದ ಅವಧಿ ನೀಡಿ ದುರ್ವಾಸನೆ ಮತ್ತು ವಿಷಾನಿಲ ಸೋರಿಕೆಯಾಗದಂತೆ ಅಣಬೆ ತಯಾರಿಸಲು ಅವಕಾಶ ನೀಡಲಾಗಿತ್ತು. ಒಂದು ವೇಳೆ ಈ ಅವಧಿಯಲ್ಲಿ ಮತ್ತೆ ದುರ್ವಾಸನೆ ಕಂಡು ಬಂದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಿದ್ದರು. ಆದೇಶ ಬಂದ ಬೆನ್ನಿಗೇ ಘಟಕದ ಮುಖ್ಯಸ್ಥರು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಒಂದು ವಾರದ ಬದಲಿಗೆ 20ದಿನಗಳ ಕಾಲಾವಕಾಶ ಕೋರಿದ್ದರು ಎನ್ನಲಾಗಿದೆ.
ಸದ್ಯ ಜಿಲ್ಲಾಧಿಕಾರಿಯವರು ದುರ್ವಾಸನೆ ಇಲ್ಲದೆ, ವಿಷಾನಿಲ ಸೋರಿಕೆಯಾಗದಂತೆ ಅಣಬೆ ತಯಾರಿಕೆ ಸೂಚನೆ ನೀಡಿದ್ದರೂ, ಮಂಗಳವಾರದಿಂದ ಅಣಬೆ ತಯಾರಿಕೆ ಆರಂಭಿಸಿರುವ ಘಟಕ ದೊಡ್ಡ ಪ್ರಮಾಣದ ಶಬ್ದದೊಂದಿಗೆ ದುರ್ವಾಸನೆಯುಕ್ತ ವಿಷಾನಿಲ ಸೋರಿಕೆ ಮಾಡುತ್ತಾ ತಮ್ಮ ಘಟಕವನ್ನ ಆರಂಭಿಸಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಬದುಕುವುದು ಅಸಾಧ್ಯ. ಒಂದೋ ಈ ಅಣಬೆ ತಯಾರಿಕಾ ಘಟಕನ್ನು ಮುಚ್ಚಿಸಬೇಕು ಇಲ್ಲವಾದರೆ ಗ್ರಾಮಸ್ಥರಿಗೆ ಸಾಮೂಹಿಕ ದಯಾಮರಣಕ್ಕೆ ಅವಕಾಶ ನೀಡಲಿ ಎಂದು ಗ್ರಾಮಸ್ಥರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರ್ವಾಸನೆ, ಉಸಿರಾಟದ ತೊಂದರೆಯಿಂದ ಆಗುವ ಆರೋಗ್ಯ ಸಮಸ್ಯೆ ಅಥವಾ ಯಾರಾದರೂ ಸತ್ತರೆ ಜಿಲ್ಲಾಡಳಿತವೇ ನೇರ ಹೊಣೆ. ಇಲ್ಲಿನ ಮೂರು ಸೆಂಟ್ಸ್ ಪ್ರದೇಶದಲ್ಲಿ ತುಂಬಾ ವಾಸನೆ ಬರುತ್ತಿದೆ. ಇಲ್ಲಿ ಕುಳಿತು ಕೊಳ್ಳುವುದೂ ಅಸಾಧ್ಯವಾಗಿದೆ. ನಮಗೆ ಉಸಿರು ಕಟ್ಟುತ್ತಿದೆ. ಮಾತನಾಡಲೂ ಕಷ್ಟವಾಗುತ್ತಿದೆ. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದರೂ ದುರ್ವಾಸನೆ ಬರುತ್ತಿದೆ. ಹೀಗೇ ಆದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ಸ್ವಂತ ಮನೆಗಳನ್ನು ಬಿಟ್ಟು ಎಲ್ಲಿಗೆ ಹೋಗಿ ಕುಳಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಉತ್ತರಿಸಲಿ. ಜಿಲ್ಲಾಧಿಕಾರಿ ಘಟಕದವರಿಗೆ 20 ದಿನ ನೀಡಿದ್ದಾರೆ. ಈ 20ದಿನಗಳಲ್ಲಿ ದುರ್ವಾಸನೆ ಹಾಗೂ ಉಸಿರಾಟದ ತೊಂದರೆಯಿಂದ ಗ್ರಾಮಸ್ಥರಿಗಾಗುವ ಆರೋಗ್ಯ ಸಮಸ್ಯೆಗಳು ಅಥವಾ ಯಾರಾದರೂ ಸತ್ತರೆ ಜಿಲ್ಲಾಡಳಿತವೇ ನೇರಹೊಣೆ ಎಂದು ಆಶ್ರಯ ನಗರ ನಿವಾಸಿ ನೌಷಾದ್ ಎಂಬವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕಳೆದ ಮೂರು ದಿನಗಳಿಂದ ವಾಸನೆ ಬರುತ್ತಿದೆ. ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಒಂದು ಹೊತ್ತಿನ ಊಟವನ್ನೂ ಮಾಡಲಾಗುತ್ತಿಲ್ಲ. ಇಂತಹಾ ಸ್ಥಳದಲ್ಲಿ ಯಾಕೆ ಮನೆ ಮಾಡಿದ್ದೀರಿ, ಮನೆಗೆ ಬಂದಿದ್ದ ನೆಂಟರೂ ಮನೆಯಿಂದ ಹೋಗಿದ್ದಾರೆ. ವಾಸನೆಯಿಂದ ತಲೆ ನೋವು ಬರುತ್ತಿದೆ".
ವಿಜಯಾ ಅಶೋಕ್, ಗ್ರಾಮಸ್ಥೆ ವಾಮಂಜೂರು
"ಕಳೆದ 2-3 ದಿನಗಳಿಂದ ವಾಸನೆ ಬರುತ್ತಿದೆ. ಜೊತೆಗೆ ಅಲ್ಲಿನ ಯಂತ್ರೋಪಕರಣಗಳ ಶಬ್ದವೂ ತುಂಬಾ ಜೋರಾಗಿ ಕೇಳಿಸುತ್ತಿದೆ. ಇದರಿಂದ ತಲೆ ನೋವು ಆರಂಭವಾಗಿದೆ. ಮನೆಯಲ್ಲಿ ಕುಳಿತುಕೊಳ್ಳಲೂ ಆಗುತ್ತಿಲ್ಲ".
- ಕಾವ್ಯಾ ಅಭಿ, ವಾಮಂಜೂರು ನಿವಾಸಿ







