ವಿಟ್ಲ: ಸಿಪಿಐ 25ನೇ ದ.ಕ. ಜಿಲ್ಲಾ ಸಮ್ಮೇಳನ

ವಿಟ್ಲ: ಒಂದು ಕಾಲದಲ್ಲಿ ದ.ಕ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಆಗಿತ್ತು. ಆದ್ರೆ ಇಂದು ಕೋಮು ಸಂಘರ್ಷ, ಕೊಲೆ ವಿಚಾರ ರಾಜ್ಯಕ್ಕೆ ಹೋಗುತ್ತಿದೆ. ಕಾಂಗ್ರೆಸ್ ಬಿಜೆಪಿ ಜನರ ರಕ್ತದಲ್ಲಿ ರಾಜಕಾರಣ ಮಾಡುತ್ತಿದ್ದು, ಯುವ ಜನಾಂಗದ ದಿಕ್ಕನ್ನು ತಪ್ಪಿಸುವ ಮೂಲಕ ಅವರ ಜೀವನವನ್ನು ಹಾಳು ಮಾಡುತ್ತಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ಧನಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ವಿಟ್ಲದಲ್ಲಿ ನಡೆದ ಭಾರತ್ ಕಮ್ಯುನಿಸ್ಟ್ ಪಕ್ಷ ಸಿಪಿಐ ಇದರ 25ನೇ ಜಿಲ್ಲಾ ಸಮ್ಮೇಳನ ಮತ್ತು ರ್ಯಾಲಿ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು.
ಈ ದೇಶದಲ್ಲಿ ಕೋಮು ಸಂಘರ್ಷ ನಡೆಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ರೈತರಿಗೆ ಭೂಮಿ ಕೊಡುವ ಬದಲು ಶ್ರಿಮಂತರಿಗೆ ನೀಡುತ್ತಾ ಅವರಿಗೆ ಬೆಂಬಲವಾಗಿ ನಿಂತಿದೆ. ಮೋದಿ ಸರಕಾರ ಕಾರ್ಮಿಕ ಪರ ಇರುವ ಸರಕಾರ ಅಲ್ಲ. ಹೂ ಮಾರುವವರುಗೂ ತೆರಿಗೆ ಹಾಕುತ್ತಿದೆ. ಇದೇ ಹಣದಿಂದ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಧ್ವನಿ ಎತ್ತುತ್ತಿಲ್ಲ. ಮೋದಿ ದುರಾಡಳಿತ ಹೊರಗಡೆ ಬಾರದಂತೆ ದ.ಕ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡಿದೆ. ಕಾರ್ಮಿಕ ಮಕ್ಕಳಿಗೆ ಗೋಡ್ಸೆ , ಸಾವರ್ಕರ್ ಆದರ್ಶ ಅಗತ್ಯವಿಲ್ಲ. ಮೋದಿಯನ್ನು ಟೀಕೆ ಮಾಡಿದರೆ ದೇಶದ್ರೋಹ ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಮಾತನಾಡಿದರೆ ಕ್ಷೇತ್ರದ ಪಾವಿತ್ರ್ಯಕ್ಕೆ ಆಗುತ್ತದೆ. ಅದೇ ರೀತಿ ಮೋದಿಯನ್ನು ಟೀಕಿಸಿದರೆ ದೇಶದ್ರೋಹ ಆದಂತೆ ಎಂದು ಬಿಂಬಿಸಲಾಗುತ್ತದೆ ಎಂದರು.
ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಸಿಪಿಐ ಭ್ರಷ್ಟಚಾರ ಮುಕ್ತವಾಗಿ ಈ ದೇಶದಲ್ಲಿ ಆಡಳಿತ ನಡೆಸಿದೆ. ದ.ಕ ಜಿಲ್ಲೆ ದೇಶದಲ್ಲಿಯೇ ಸುದ್ದಿಯಾಗುತ್ತಿದ್ದು, ಈ ನೆಲದಲ್ಲಿ ಧರ್ಮದ ಅಮಲಿನಲ್ಲಿ ಧರ್ಮದ ಹೆಸರಿನಲ್ಲಿ ಕೊಲೆ ನಡೆಯುತ್ತಿದೆ. ಇದಕ್ಕೆ ಯಾವುದೇ ಧರ್ಮದ ಜನರು ಅಲ್ಲ. ಕೋಮುಶಕ್ತಿ ಸಂಘಟನೆಗಳು ನೇರ ಹೊಣೆ ಯಾಗಿರುತ್ತದೆ. ಇಂತಹ ಘಟನೆಗಳು ನಡೆಯದಂತೆ ಸಿಪಿಐ ಸಮ್ಮೇಳನಲ್ಲಿ ನಿರ್ಣಯ ಕೈಗೊಳ್ಳ ಲಾಗಿದೆ. ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಹತ್ಯೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸೂಕ್ತ ನ್ಯಾಯ ಒದಗಿ ಸಲು ನಿರ್ಣಯ ಮಾಡಲಾಗಿದೆ. ಶ್ರೀಮಂತರು ಭೂಮಿ ಹೊಂದುತ್ತಿದ್ದು, ಸರಕಾರ ಬಡವರಿಗೆ ಭೂಮಿ ನೀಡಬೇಕು. ಅದಾನಿ, ಅಂಬಾನಿ ಸಂಪತ್ತು ನೀಡಲಾಗುತ್ತಿದೆ. ರೈತರಿಗೆ, ಬಡವರಿಗೆ ಇಲ್ಲಿಯ ಸರಕಾರ ಗಳು ವಂಚನೆ ಮಾಡುತ್ತಿದೆ. ನಾವು ರೈತರ ಪರವಾಗಿರುವ ಪಕ್ಷವಾಗಿದೆ. ಅವರಿಗೆ ಅನ್ಯಾಯ ಮಾಡಿದರೆ ನಾವು ಸುಮ್ಮನೆ ಕೂರಲ್ಲ. ದ್ವೇಷ ರಾಜಕಾರಣ ಬದಲಿಸಿ, ಪ್ರೀತಿ ಬಿತ್ತುವ ಕೆಲಸ ಸಿಪಿಐ ನಿಂದ ಆಗಬೇಕಿದೆ ಎಂದರು.
ಸಿಪಿಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ ರೈತರು, ಬಡಜನರ ಮೇಲೆ ದಬ್ಬಾಳಿಕೆ ನಡೆಯು ತ್ತಿದೆ. ನಮ್ಮ ಶಕ್ತಿ ಕಡಿಮೆ ಆಗುತ್ತಿದ್ದು, ಬಲವಾದ ಶಕ್ತಿ ಮೂಲಕ ಅನ್ಯಾಯ ಎದುರಿಸಬೇಕು. ದ.ಕ ಜಿಲ್ಲೆಯ ಹೆಸರು ಬದಲಾವಣೆ ಚರ್ಚೆ ಬಂದಾಗ ಬಲವಾಗಿ ಎದುರಿಸಿದ್ದು, ನಾವು. ಅಮಾಯಕರ ಹತ್ಯೆ ನಡುವೆ ಹೆಸರಿನ ಚರ್ಚೆ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದೇವೆ ಎಂದ ಅವರು ಜನರ ದ್ವನಿ ಎತ್ತಲು ಅಡ್ಡಿಯಾಗುತ್ತಿದ್ದು, ಇದೀಗ ಸೋಶಿಯಲ್ ಮೀಡಿಯ ಮೂಲಕ ಬಡವರು ಧ್ವನಿ ಎತ್ತುವಂತಾಗಿದೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲಾ 25ನೇ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಮಿಕರಿಗೆ ಸೌಲಭ್ಯ ದೊರಕಿಸಿ ಕೊಟ್ಟ ಪಕ್ಷವಾದರೆ ಸಿಪಿಐ ಪಕ್ಷ ಆಗಿದೆ. ಬೀಡಿ ಕಾರ್ಮಿಕ ಮಕ್ಕಳ ಸ್ಕಾಲರ್ಶಿಪ್ ಮೊದಲಾದ ಸಮಸ್ಯೆಗಳಿಗೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಕಟ್ಟಡ ಕಾರ್ಮಿಕ ಸಮಸ್ಯೆಗೆ ಸ್ಪಂದಿಸಿದೆ. ಕೋಮು ಗಲಭೆ ನಡೆದಿದೆ ಎಂದು ಕಲ್ಲು, ಮರಳು ನಿಲ್ಲಿಸಲಾಗಿದೆ. ದ್ವೇಷ ಭಾಷಣ ಮಾಡುವವರನ್ನು ವೇದಿಕೆಯಿಂದಲೇ ಎಳೆದು ತಂದು ಬಂಧಿಸಬೇಕು. ಅಮಾಯಕರ ಮಕ್ಕಳು ಕೊಲೆಯಾಗುತ್ತಿದ್ದಾರೆ. ಶ್ರೀಮಂತರ ಮಕ್ಕಳು ಜೈಲಿಗೆ ಹೋಗುವುದಿಲ್ಲ. ಬಡವರ ಮಕ್ಕಳು ಜೈಲಿಗೆ ಹೋಗುತ್ತಿದ್ದಾರೆ ಎಂದರು.
ಬೆಳಿಗ್ಗೆ ವಿಟ್ಲದ ನಾಡಕಚೇರಿಯಿಂದ ವಿಟ್ಲ ಪೇಟೆ ಮೂಲಕ ವಿಟ್ಲ ಬ್ರೈಟ್ ಆಡಿಟೋರಿಯಂ ವರೆಗೆ ನೂರಾರು ಕಾರ್ಯಕರ್ತರೊಂದಿಗೆ ಆಕರ್ಷಕ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬಳಿಕ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್ ವಿ ರಾವ್, ಸಿಪಿಐ ದ.ಕ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಶಿಕಲ ಗಿರೀಶ್, ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಎಸ್ ಬೇರಿಂಜ, ಸಿಪಿಐ ಉಡುಪಿ ತಾಲೂಕು ಕಾರ್ಯದರ್ಶಿ ಶಿವಾನಂದ, ಎ ಪ್ರಭಾಕರ ರಾವ್, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯೆ ಸೆಲೀಕಾ ಹಸೈನಾರ್, ಶಮೀತಾ ಮೊದಲಾದವರು ಉಪಸ್ಥಿತರಿದ್ದರು.
ಸುರೇಶ್ ಕುಮಾರ್ ಬಂಟ್ವಾಳ್ ನಿರೂಪಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಸ್ವಾಗತಿಸಿದರು. ಸೀರಾಮ ಕಡಂಬ ವಂದಿಸಿದರು.







