ವಿಟ್ಲ | ಮಲ್ಲಿಗೆ ಕೃಷಿಯಲ್ಲಿ ಲಾಭದ ಆಮಿಷವೊಡ್ಡಿ 70 ಲಕ್ಷ ರೂ. ವಂಚನೆ

ವಿಟ್ಲ, ನ.28: ಮಹಿಳೆಯೊಬ್ಬರಿಗೆ ಮಲ್ಲಿಗೆ ಕೃಷಿಯಲ್ಲಿ ಲಾಭದ ಆಮಿಷವೊಡ್ಡಿ ಹಂತ ಹಂತವಾಗಿ 70 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಕಡಂಬು ನಿವಾಸಿ ಬೀನಾ ರಾಡ್ರಿಗಸ್ ವಂಚನೆಗೊಳಗಾದವರು. ಫಿಲೋಮಿನಾ ಡಿಸೋಜಾ ವಂಚಿಸಿದ ಆರೋಪಿ.
ಆರೋಪಿ ಫಿಲೋಮಿನಾ ಡಿಸೋಜಾ 2024ರ ಅಕ್ಟೋಬರ್ ತಿಂಗಳಲ್ಲಿ ಬೀನಾ ರಾಡ್ರಿಗಸ್ ಬಳಿ ಮಲ್ಲಿಗೆ ಕೃಷಿಗಾಗಿ ತಾನು ಸರಕಾರದಿಂದ ಸಾಲ ಪಡೆಯುತ್ತಿದ್ದು, ಅದರಲ್ಲಿ ಹೆಚ್ಚಿನ ಸಬ್ಸಿಡಿ ಹಣ ಸಿಗಲಿದೆ. ಅದರಲ್ಲಿ ಪಾಲು ಹಣವನ್ನು ನೀಡುತ್ತೇನೆ. ಅರ್ಜಿ ಹಾಕಲು ಆರಂಭದಲ್ಲಿ 30,000 ರೂ. ಪಾವತಿಸಬೇಕಾಗುತ್ತದೆ ಎಂದು ಹೇಳಿ, ಬೀನಾರಿಂದ ಹಣ ಪಡೆದುಕೊಂಡಿದ್ದಳು.
ಬಳಿಕ ಆರೋಪಿ, ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ 10 ಲಕ್ಷ ರೂ. ಪಾವತಿಸಿದಲ್ಲಿ ಇನ್ನೂ 10 ಲಕ್ಷ ರೂ. ಹೆಚ್ಚುವರಿ ಸಾಲ ದೊರೆಯುತ್ತದೆ. ಅದರಲ್ಲಿ 75 ಶೇ. ಮನ್ನಾ ಆಗುತ್ತದೆ ಎಂದು ನಂಬಿಸಿ ಸಬ್ಸಿಡಿ ಮೌಲ್ಯವನ್ನು 10 ಲಕ್ಷಕ್ಕೆ ಏರಿಸಲು ಹೆಚ್ಚುವರಿ ಹಣವನ್ನು ಪಾವತಿಸುವಂತೆ ಹೇಳಿದ್ದಾಳೆ. ಬಳಿಕ ಒಂದೊಂದು ಕಾರಣವನ್ನು ಹೇಳುತ್ತಾ ಮಲ್ಲಿಗೆ ಕೃಷಿಗಾಗಿ ಸರಕಾರದಿಂದ ಬರುವ ಸಬ್ಸಿಡಿಯಲ್ಲಿ ಪಾಲು ಕೊಡಿಸುವುದಾಗಿ ನಂಬಿಸಿ 2024ರ ಅ.3ರಿಂದ 2025ರ ನ.19ರ ವರೆಗೆ ಹಂತ ಹಂತವಾಗಿ ಒಟ್ಟು 70 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಬೀನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







