ಮಂಗಳೂರು ವಿವಿಯಲ್ಲಿ ʼವೇವ್ಸ್ 2025 –ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವʼ ಉದ್ಘಾಟನೆ

ಕೊಣಾಜೆ : ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಧನಾತ್ಮಕ ಭಾವದೊಂದಿಗೆ ಒತ್ತಡಮುಕ್ತ ಬದುಕನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಶಾನಿ ಕೆ.ಆರ್. ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮಂಗಳೂರು ವಿವಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ʼವೇವ್ಸ್ 2025 – ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವʼಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದರು.
ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಭೆಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ಶೈಕ್ಷಣಿಕ ಸಾಧನೆ ಮಾಡದವರೂ ತಮ್ಮ ಪ್ರತಿಭೆಯ ಮೂಲಕ ಜೀವನದಲ್ಲಿ ಯಶಸ್ಸುಗಳಿಸಿದವರು ಇದ್ದಾರೆ. ಶಿಕ್ಷಣದೊಂದಿಗೆ ಪ್ರತಿಭಾ ಕೌಶಲ್ಯಗಳೊಂದಿಗೆ ಉತ್ತಮ ಅವಕಾಶಗಳನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಇಂತಹ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತೊಡಗಿಸಿಕೊಂಡು ಸೃಜನಾತ್ಮಕವಾಗಿ ಬೆಳೆಯಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾದ ಪ್ರೊ. ಪಿ.ಎಲ್. ಧರ್ಮ ಅವರು ದೇಶ ದೇಶಗಳ ನಡುವೆ ವೈರತ್ವಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಗಳ ನಡುವೆ ಸೌಹಾರ್ದತೆಯನ್ನು ಬೆಸೆಯುವ ಕೆಲಸವನ್ನು ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.
ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೆಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ.ಲವೀನ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಈ ಉತ್ಸವದಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ರಂಗಭೂಮಿ ಮತ್ತು ಲಲಿತಕಲೆ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ವಾದ್ಯ/ಸ್ವರ, ಜನಪದ ವಾದ್ಯ, ಶಾಸ್ತ್ರೀಯ ಮತ್ತು ಜನಪದ ನೃತ್ಯ, ಸೃಜನಾತ್ಮಕ ನೃತ್ಯ ನಿರ್ದೇಶನ, ಚರ್ಚೆ ಸ್ಪರ್ಧೆ, ಭಾಷಣ, ರಸಪ್ರಶ್ನೆ, ಏಕಾಂಕ ನಾಟಕ, ಕಿರು ನಾಟಕ, ಮೂಕಾಭಿನಯ (ಮೈಮ್), ಹಾಸ್ಯಾನುಕರಣ (ಮಿಮಿಕ್ರಿ), ಹಾಗೂ ಚಿತ್ರಕಲೆ, ಕೊಲಾಜ್, ಪೋಸ್ಟರ್ ನಿರ್ಮಾಣ, ಮಣ್ಣಿನ ಶಿಲ್ಪ, ವ್ಯಂಗ್ಯಚಿತ್ರ, ರಂಗೋಲಿ ಮುಂತಾದ ದೃಶ್ಯಕಲೆ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.







