5 ಸಾವಿರ ವರ್ಷಗಳ ಇತಿಹಾಸ ಇರುವ ಸನಾತನ ಧರ್ಮಕ್ಕೆ ಆರೆಸ್ಸೆಸ್‌ನಿಂದ ಅಪಾಯವಿದೆ: ಬಿ.ಕೆ. ಹರಿಪ್ರಸಾದ್

ಮಂಗಳೂರು: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಗಣಮನ ರಾಷ್ಟ್ರಗೀತೆ ಅಲ್ಲ ಎಂದು ಹೇಳಿರುವುದು ದೇಶದ್ರೋಹದ ಹೇಳಿಕೆಯಾಗಿದ್ದು, ಕೇಸು ದಾಖಲಿಸಬೇಕು. ಬಿಜೆಪಿಯವರು ರಾಷ್ಟ್ರಗೀತೆ ಹಾಗೂ ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೂರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಕೊಂದಾಯಿತು. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದ ಠಾಗೂರ್ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನು ನೋಡಿದಾಗ ಇವರು ದೇಶದ್ರೋಹಿಗಳು ಎನ್ನುವುದು ಸ್ಪಷ್ಟ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು. ಏನೇ ಮಾಡಿದರೂ ರಾಜ್ಯದ ಶಾಸಕರು ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಆರೆಸ್ಸೆಸ್ ನಿಷೇಧ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಆರೆಸ್ಸೆಸ್ ಏನು ಅನ್ನೋದು ಕೇರಳದಲ್ಲಿ ಗೊತ್ತಾಗಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಆ ಪ್ರಕರಣದ ಆರೋಪಿಯ ಪರ ಬಿಜೆಪಿ ಮಂತ್ರಿಗಳು ನಿಂತಿದ್ದರು. ಆರೆಸ್ಸೆಸ್‌ನಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. 5 ಸಾವಿರ ವರ್ಷಗಳ ಇತಿಹಾಸ ಇರುವ ಸನಾತನ ಧರ್ಮಕ್ಕೆ ಆರೆಸ್ಸೆಸ್‌ನಿಂದ ಅಪಾಯವಿದೆ. ಈ ಹಿಂದೆ ತಾಲಿಬಾನ್ ವಿರೋಧಿಸಿದವರು ಈಗ ಅವರನ್ನೇ ಆಹ್ವಾನಿಸುತ್ತಿದ್ದಾರೆ. ಅವರಿಗೆ ಇನ್ನೂರು ಕೋಟಿ ಸಹಾಯಧನ ಕೊಡುತ್ತಿದ್ದಾರೆ. ನಾವೆಲ್ಲಾ ಆ ಥರ ಮಾಡಲು ಆಗಲ್ಲ. ನಾವು ಜಾತ್ಯಾತೀತ ತತ್ವದಲ್ಲಿ, ಬಹುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಎಂದರು.
ಬಿಹಾರ ಚುನಾವಣೆಯಲ್ಲಿ ಪಕ್ಷದೊಳಗೆ ಯಾವುದೇ ಹಗ್ಗ ಜಗ್ಗಾಟ ಪರಿಸ್ಥಿತಿಯಿಲ್ಲ:
ಬಿಹಾರ ಚುನಾವಣೆಯಲ್ಲಿ ಪಕ್ಷದೊಳಗೆ ಯಾವುದೇ ಹಗ್ಗ ಜಗ್ಗಾಟ ಪರಿಸ್ಥಿತಿಯಿಲ್ಲ. ಕಾಂಗ್ರೆಸ್ ಪಕ್ಷ, ಮಹಾಘಟಬಂಧನ್ ವರ್ಸಸ್ ಚುನಾವಣಾ ಆಯೋಗದ ನಡುವೆ ಚುನಾವಣೆ ನಡೆಯುತ್ತಿದೆ. ಅಂಪೈರ್ ಮ್ಯಾಚಿಗೆ ಬಂದಾಗ ಆಟ ಏನಾಗುತ್ತೆ ಅನ್ನೋದು ನೋಡಬೇಕು. ಹಿಂದೆ ಹರ್ಯಾಣ ಉಸ್ತುವಾರಿ ನಾನು ವಹಿಸಿಕೊಂಡಿದ್ದೆ. ಅಲ್ಲಿನ 8 ಕ್ಷೇತ್ರಗಳಲ್ಲಿ 22 ಸಾವಿರ ಮತಗಳ ಕಳವಾಗಿದೆ. ಬ್ರಝಿಲ್‌ನ ಮಾಡೆಲ್ ಒಬ್ಬಳ ಫೋಟೋ ಬಳಸಿ ಹಲವು ಜಾಗದಲ್ಲಿ ಓಟ್ ಮಾಡಿಸಿದ್ದಾರೆ. ರಾಹುಲ್ ಗಾಂಧಿಯವರ ಓಟ್ ಚೋರಿ ಆರೋಪ ಸಾಬೀತಾಗಿದೆ. ಹರ್ಯಾಣ ಚುನಾವಣೆಯಲ್ಲಿ ಎಲ್ಲಾ ಎಕ್ಸಿಟ್ ಪೋಲ್ ನಮ್ಮ ಪರ ಇತ್ತು. ಹಾಗಿದ್ದರೂ ನಾವು ಸೋತಿರುವುದಕ್ಕೆ ವೋಟರ್ ದಾಂಧಲೆ ಕಾರಣ. ಯಾರು ಕಾಂಗ್ರೆಸ್‌ಗೆ ಅಚಲವಾಗಿ ಮತ ಹಾಕುತ್ತಾರೋ ಅವರ ಮತಗಳನ್ನೇ ಕದಿಯಲಾಗಿದೆ ಎಂದು ಆರೋಪಿಸಿದರು.
ಬಿಜೆಪಿಯವರು ಓಟ್ ಚೋರಿಗೆ ಖರ್ಚು ಕಮ್ಮಿ ಅಂತ ಅದಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಶಾಸಕರ ಕಳ್ಳತನ ನಡೆಯುತ್ತಿತ್ತು. ಈಗ ಮತಗಳ್ಳತನ ಮಾಡುತ್ತಿದ್ದಾರೆ. ಈಗ ಬಿಜೆಪಿ ಖಜಾನೆ ತುಂಬಿದೆ. ಬಿಜೆಪಿ ಈವರೆಗೂ ಸಂಪೂರ್ಣ ಚುನಾವಣೆ ವಾಮ ಮಾರ್ಗದಲ್ಲಿಯೇ ಗೆದ್ದಿದೆ ಎಂದವರು ಹೇಳಿದರು.







