ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ: ಪ್ರಯಾಣಿಕರ ಸೆಲ್ಫಿ ದುಸ್ಸಾಹಸ
ಸೂಕ್ತ ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ

ಬೆಳ್ತಂಗಡಿ: ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಇಂದು ಬೆಳಗ್ಗೆ ಹೆದ್ದಾರಿಯ ಮಧ್ಯೆ ಒಂಟಿ ಸಲಗ ಕಾಣಿಸಿಕೊಂಡಿದೆ. ರಸ್ತೆಯಲ್ಲೇ ನಿಂತಿದ್ದ ಕಾಡಾನೆಯನ್ನು ನೋಡಿದ ಕೆಲ ವಾಹನ ಪ್ರಯಾಣಿಕರು ಸೆಲ್ಫಿ ತೆಗೆಯುವ ಉದ್ದೇಶದಿಂದ ವಾಹನಗಳಿಂದ ಇಳಿದು ಅದರ ಸಮೀಪದವರೆಗೆ ತೆರಳಿದ್ದಾರೆ. ಈ ವೇಳೆ ಆನೆ ರೋಷ ವ್ಯಕ್ತಪಡಿಸಿತು. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳ ಸಂಚಾರ ಸ್ಥಗಿತಗೊಂಡಿತು. ಅದೃಷ್ಟವಶಾತ್ ಆನೆ ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ.
ಈ ದುಸ್ಸಾಹಸದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರ ಈ ನಡೆಯನ್ನು ಪರಿಸರ ತಜ್ಞರು ತೀವ್ರವಾಗಿ ಖಂಡಿಸಿದ್ದಾರೆ. ವನ್ಯಜೀವಿಗಳು ಮಾನವ ಸಂಪರ್ಕದಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಈ ತರಹದ ವರ್ತನೆ ದುರಂತಗಳಿಗೆ ದಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಸೂಕ್ತ ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ
ರಸ್ತೆಗೆ ಬಂದ ಕಾಡಾನೆ ಜೊತೆ ಸೆಲ್ಫಿ ಫೋಟೊ ತೆಗೆಯುವ ದುಸ್ಸಾಹಸಕ್ಕೆ ಕೈಹಾಕಿದ ವಾಹನ ಸವಾರರಿಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಚಾರ್ಮಾಡಿ ಘಾಟ್ 4ನೇ ತಿರುವಿನ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆ ಜೊತೆ ಸೆಲ್ಫಿ ತೆಗೆದವರ ವಾಹನ ನಂಬರ್‌ಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಅರಣ್ಯ ಸಚಿವರು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಅರಣ್ಯ ಪ್ರದೇಶದೊಳಗೆ ಸಾಗುವ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಕೆಳಗೆ ಇಳಿಯುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದಾಗ್ಯೂ ಕೆಲವು ಪ್ರವಾಸಿಗರು/ಪ್ರಯಾಣಿಕರು ಆನೆ, ಜಿಂಕೆ ಇತ್ಯಾದಿ ವನ್ಯ ಮೃಗಗಳನ್ನು ಕಂಡಾಗ ವಾಹನದಿಂದ ಇಳಿದು ಪೋಟೋ ತೆಗೆಯುವ, ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಅತಿರೇಕದ ವರ್ತನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಅರಣ್ಯದ ಪ್ರವೇಶದ ಬಳಿ ಎಚ್ಚರಿಕೆ ಫಲಕ ಹಾಕಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.







